ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಡಿ.14ರಂದು ಜನತಾ ಆವಿಷ್ಕಾರ್ 2K22(ಬಿಸ್ ನೆಸ್ ಡೇ) ವಿನೂತನ ಕಾರ್ಯಕ್ರಮ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಿ.ವಿ.ವಿ.ಮಂಡಳಿ, ಕ.ರಾ.ರ.ಸಾ.ನಿಗಮದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರು ಮಾತನಾಡಿ, ಜನತಾ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಾಧನೆಗಳನ್ನು ಶ್ಲಾಘಿಸಿದರು.ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಆವಿಷ್ಕಾರ್ ನಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜನತಾ ಫಿಶ್ ಮಿಲ್ ನ ಮಾಲಕ ಆನಂದ ಸಿ.ಕುಂದರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜನತಾ ಕಾಲೇಜಿನ ಕಾರ್ಯ ನಿಜಕ್ಕೂ ಮಹತ್ವಪೂರ್ಣವಾದದ್ದು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅರೇಕಾ ಟೀ ಇದರ ಸ್ಥಾಪಕಿ ನಿವೇದಿತಾ ನೆಂಪೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸಲು ಜನತಾ ಕಾಲೇಜು ಮಾಡುತ್ತಿರುವ ಕಾಯಕವನ್ನು ಶ್ಲಾಘಿಸಿ ವಿದ್ಯಾರ್ಥಿಗಳೇ ಜೀವನದಲ್ಲಿ ಕಷ್ಟ ಪಡುವುದನ್ನು ಕಲಿಯಿರಿ ಮುಂದೆ ನಿಮ್ಮ ಬಾಳು ಉಜ್ವಲವಾಗುತ್ತದೆ ಎಂದರು.
ಅತಿಥಿ ಡಾ. ಗೋವಿಂದ ಬಾಬು ಪೂಜಾರಿಯವರು ಮಾತನಾಡಿ ಬದುಕು ಕಟ್ಟಿಕೊಳ್ಳಲು ವ್ಯವಹಾರ ಮೇಳದಂತಹ ಕಾರ್ಯಕ್ರಮಗಳು ಪೂರಕವಾಗಿವೆ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬೈಂದೂರು ಹಾಗೂ ಕುಂದಾಪುರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯನ್ನು ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕಿ ಶ್ರೀಮತಿ ಚಿತ್ರಾ ಕಾರಂತ್ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಉದ್ಯಮಿಗಳಾದ ಉದಯ ಪೂಜಾರಿ,ಎಚ್.ಶಂಕರ್ ಹೆಗ್ಡೆ ಜನ್ನಾಡಿ, ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳಾವರ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸುಮಾರು 26 ವಿವಿಧ ಬಗೆಯ ಜನತಾ ಸ್ಟಾಲ್ ಗಳ ಮೂಲಕ ವ್ಯವಹಾರ ಆರಂಭಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ವ್ಯವಹಾರ ಮೇಳದಲ್ಲಿ ವ್ಯವಹಾರ ನಡೆಸಿದರು. ವಿಜ್ಞಾನ ಮಾದರಿ ಪ್ರದರ್ಶನ, ಜನತಾ ಚಿತ್ರಸಿರಿ ಹಾಗೂ ಜನತಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗನ್ನು ನೀಡಿದ್ದವು.
ವಾಣಿಜ್ಯ ವಿಭಾಗದ ಉಪನ್ಯಾಸಕ ಹರ್ಷ ಶೆಟ್ಟಿ ಸ್ವಾಗತಿಸಿ ಉಪನ್ಯಾಸಕ ಪ್ರತಾಪ್ ಪ್ರಾಸ್ತಾವಿಸಿದರು.
ಕಾಲೇಜಿನ ತರಬೇತಿ ಅಧಿಕಾರಿ ಅಭಿಲಾಷ್ ಕ್ಷತ್ರಿಯ ಅತಿಥಿಗಳನ್ನು
ಪರಿಚಯಿಸಿ, ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಅಭಿಜಿತ್ ವಂದಿಸಿದರು.