ಮಂಗಳೂರು: ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೂರನೇ ಐಷಾರಾಮಿ ಹಡಗು ಆಗಮಿಸಿದೆ. ಎಂಎಸ್ ನೌಟಿಕಾ ಎನ್ನುವ ಈ ಹಡಗಿನಲ್ಲಿ ಸುಮಾರು 548 ಪ್ರಯಾಣಿಕರು ಹಾಗೂ 397 ಸಿಬ್ಬಂದಿಗಳು ಪ್ರವಾಸ ಮಾಡುತ್ತಿದ್ದು, ಹಡಗು 30,277 ಟನ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಾಲ್ಡೀವ್ ದ್ವೀಪಕ್ಕೆ ಪ್ರಯಾಣ ಬೆಳೆಸಿರುವ ಈ ಹಡಗು ಮಸ್ಕತ್‌ನಿಂದ ಭಾರತಕ್ಕೆ ಬಂದಿದ್ದು, ಮುಂಬೈ, ಮೊರ್ಮಗಾಂವ್ ಮೂಲಕ ಮಂಗಳೂರು ಬಂದರು ಪ್ರವೇಶಿಸಿದೆ. ನವ ಮಂಗಳೂರು ಬಂದರಿಗೆ ಗುರುವಾರ ಬೆಳಿಗ್ಗೆ 6 ಗಂಟೆಗೆ ತಲುಪಿದ್ದು, ಅದರಲ್ಲಿದ್ದ ಪ್ರಯಾಣಿಕರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಕಾರ್ಕಳದ ಗೊಮ್ಮಟೇಶ್ವರ, ಅಲೋಶಿಯಸ್ ಚರ್ಚ್ ಮತ್ತು ಅಚಲ್ ಗೇರುಬೀಜ ಕಾರ್ಖಾನೆ ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು, ಮಾರುಕಟ್ಟೆಗಳಿಗೆ ಭೇಟಿ ನೀಡಿದರು.
ಪ್ರಯಾಣಿಕರ ವೈದ್ಯಕೀಯ ತಪಾಸಣೆ, ಕ್ಷಿಪ್ರ ಸಂಚಾರಕ್ಕಾಗಿ ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡುವ ಪ್ರಯಾಣಿಕರಿಗೆ ಎರಡು ಶಟಲ್ ಬಸ್‌ಗಳು ಸೇರಿದಂತೆ 18 ಕೋಚ್‌ಗಳನ್ನು ಬಂದರು ಪ್ರಾಧಿಕಾರದ ವತಿಯಿಂದ ಒದಗಿಸಲಾಗಿತ್ತು. ಪ್ರಯಾಣಿಕರು ಕ್ರೂಸ್ ಲಾಂಜ್‌ನ ಒಳಗೆ ಆಯುಷ್ ಇಲಾಖೆಯ ಧ್ಯಾನ ಕೇಂದ್ರದ ಪ್ರಯೋಜನ ಪಡೆದರು. ಸಂಜೆ 5 ಗಂಟೆಯ ಸುಮಾರಿಗೆ ಹಡಗು ಕೊಚ್ಚಿಗೆ ಪ್ರಯಾಣ ಬೆಳೆಸಿತು.
ಚಿತ್ರ ಕೃಪೆ: ಎನ್.ಎಮ್.ಪಿ.ಟಿ












