ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಎರಡನೇ ಅವತರಣಿಕೆ ಬರಲಿದೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸದ್ಯಕ್ಕೆ ನಮ್ಮಲ್ಲಿ ಅಂತಹ ಯಾವುದೇ ಯೋಜನೆಗಳಿಲ್ಲ. ಕಾಂತಾರ 2 ರ ಅಂತಹ ಯಾವುದೇ ಯೋಜನೆ ಇದ್ದರೆ, ನಾವು ಅಧಿಕೃತ ಘೋಷಣೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೆ ರಿಷಬ್ ಮತ್ತು ಪ್ರಗತಿ ಶೆಟ್ಟಿ ಮಂಗಳೂರಿನ ಭೂತ ಕೋಲವೊಂದರಲ್ಲಿ ದೈವದೆದುರು ನಿಂತಿರುವ ದೃಶ್ಯಗಳನ್ನು ಉಲ್ಲೇಖಿಸಿ ರಿಷಭ್ ಕಾಂತಾರ-2 ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ರಿಷಬ್ ಇದನ್ನು ಅಲ್ಲಗಳೆದಿದ್ದಾರೆ.
“ಇವತ್ತು ಕಾಂತಾರ ಏನಾಗಿದೆಯೋ ಅದನ್ನು ಮಾಡಿರುವುದಕ್ಕಾಗಿ ದೈವಕ್ಕೆ ಧನ್ಯವಾದ ಹೇಳಲು ತೆರಳಿದ್ದೆವು. ನಾನು ನನ್ನ ಹೆಂಡತಿ ಮತ್ತು ಕಾಂತಾರ ತಂಡ ಹರಕೆ ತೀರಿಸಲು ಮಂಗಳೂರಿಗೆ ಹೋಗಿದ್ದೆವು. ದೈವವು ನನ್ನ ಮುಂದೆ ನಿಂತಾಗ, ನಾನು ಅಸಂಖ್ಯಾತ ಭಾವನೆಗಳಿಂದ ತುಂದಿಲನಾದೆ. ದೈವದ ಸೂಕ್ಷ್ಮ ಸನ್ನೆಗಳು, ವಿಶೇಷವಾಗಿ ಕಣ್ಣಿನ ಸನ್ನೆಗಳು ವಿವರಿಸಲಾಗದವು. ಆಶೀರ್ವಾದದ ಭಾವನೆ ಎಂದರೆ ಏನು ಎಂದು ನನಗೆ ತಿಳಿದಿದೆ. ನಾನು ಮಾಡಿದ್ದು ನನ್ನ ಮತ್ತು ಕಾಂತಾರ ಯಶಸ್ಸನ್ನು ದೈವದ ಪಾದಗಳಿಗೆ ಅರ್ಪಿಸಿ “ಇದೆಲ್ಲ ನಿನ್ನದೇ” ಎಂದು ಹೇಳಿದೆ” ಎಂದು ರಿಷಬ್ ಹೇಳಿದ್ದಾರೆ.