ಕುಂದಾಪುರ ನಗರ ಪ್ರವೇಶಿಸಲು ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕು!: ಪೊಲೀಸ್ ಇಲಾಖೆ ಕಾರ್ಯವೈಖರಿಗೆ ಸವಾರರ ಆಕ್ರೋಶ

  • ಶ್ರೀಕಾಂತ ಹೆಮ್ಮಾಡಿ

ಕುಂದಾಪುರ: ಇಲ್ಲಿಗೆ ಪ್ರವೇಶ ಕಲ್ಪಿಸುವ ಪ್ರಮುಖ ರಸ್ತೆ ಚಿಕನ್‌ಸಾಲ್ ಪ್ರವೇಶ ಹಾದಿಗೆ ಪೊಲೀಸ್ ಇಲಾಖೆ ತಡೆಬೇಲಿ ನಿರ್ಮಿಸಿದ್ದರಿಂದ ವಾಹನಗಳು ಪೇಟೆಗೆ ಬರಬೇಕಾದರೆ ಶಾಸ್ತ್ರೀ ಸರ್ಕಲ್ ಪ್ರವೇಶಿಸಿ ಬರಬೇಕು. ಒಟ್ಟಿನಲ್ಲಿ ವಾಹನ ಸವಾರರು ಕುಂದಾಪುರ ನಗರ ಪ್ರವೇಶಿಸಬೇಕಾದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವೈಜ್ಞಾನಿಕ ತಡಬೇಲಿ ಹಾಕಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ವಿರುದ್ದ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ಸಮೀಪದ ದಾರಿ ಚಿಕನ್‌ಸಾಲ್:
ಚಿಕನ್‌ಸಾಲ್ ರಸ್ತೆ ಭಟ್ಕಳ, ಶಿರೂರು, ಬೈಂದೂರು ಕಡೆಗಳಿಂದ ಸಾಗಿ ಬರುವ ವಾಹನ ಸವಾರರಿಗೆ ಕುಂದಾಪುರ ನಗರ ಪ್ರವೇಶಿಸುವ ಪ್ರಮುಖ ರಸ್ತೆಯಾಗಿದ್ದು, ಸಂಗಮ್ಸ ರ್ಕಲ್‌ನಿಂದ ಬಲಬದಿಗೆ ತಿರುಗಿ ಚಿಕನ್‌ಸಾಲ್ ರಸ್ತೆ ಪ್ರವೇಶಿಸಿದರೆ ನೇರವಾಗಿ ಕುಂದಾಪುರದ ಹಳೆ ಬಸ್‌ಸ್ಟ್ಯಾಂಡ್ ತಲುಪಬಹುದು. ಬಹಳ ವರ್ಷಗಳಿಂದಲೂ ಕುಂದಾಪುರ ನಗರ ಪ್ರವೇಶಿಸುವ ಸಮೀಪದ ಹಾದಿ ಇದಾಗಿದ್ದು, ವಾಹನ ಸವಾರರೆಲ್ಲರೂ ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ಇದೀಗ ಏಕಾಏಕಿಯಾಗಿ ಪೊಲೀಸ್ ಇಲಾಖೆ ಅಪಘಾತಗಳ ಕಾರಣವೊಡ್ಡಿ ಹೆದ್ದಾರಿ ಗುತ್ತಿಗೆ ಕಂಪೆನಿಯ ಸಹಾಯದಿಂದ ಕಾಂಕ್ರೀಟ್ ತಡಬೇಲಿಯನ್ನು ರಸ್ತೆಯ ಪ್ರವೇಶ ಹಾದಿಗೆ ಹಾಕಿಸಿದ್ದರಿಂದ ಸವಾರರು ಇದೀಗ ಹೈರಾಣಾಗಿದ್ದಾರೆ.

ಆಂಬುಲೆನ್ಸ್ ಸಂಚಾರಕ್ಕೂ ತೊಡಕು:
ಪ್ರಮುಖ ಆಸ್ಪತ್ರೆಗಳೆಲ್ಲವೂ ನಗರದ ಮಧ್ಯಭಾಗದಲ್ಲಿರುವುದರಿಂದ ತುರ್ತು ಸಂದರ್ಭಗಳಲ್ಲಿ ಭಟ್ಕಳ, ಬೈಂದೂರು ಹಾಗೂ ಕೊಲ್ಲೂರು ಭಾಗಗಳಿಂದ ಆಗಮಿಸುವ ಆಂಬುಲೆನ್ಸ್‌ಗಳು ಚಿಕನ್‌ಸಾಲ್ ರಸ್ತೆ ಮಾರ್ಗವಾಗಿಯೇ ವಿವಿಧ ಆಸ್ಪತ್ರೆಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುತಿತ್ತು. ಆದರೆ ಇದೀಗ ರಸ್ತೆ ಬಂದ್ ಮಾಡಿದ್ದರಿಂದ ಆಂಬುಲೆನ್ಸ್‌ಗಳೆಲ್ಲವೂ ಶಾಸ್ತ್ರೀ ಸರ್ಕಲ್ ಪ್ರವೇಶಿಸಿ ಸುತ್ತುವರಿದು ಬರಬೇಕಾದ ಪರಿಸ್ಥಿತಿ ಇದೆ. ಶಾಸ್ತ್ರೀ ವೃತ್ತದಲ್ಲಿ ಫ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಟ್ರಾಫಿಕ್ ಜಾಮ್ ಇರುವುದರಿಂದ ಆಂಬುಲೆನ್ಸ್‌ಗಳ ಸಮಯಗಳು ವ್ಯರ್ಥವಾಗುತ್ತಿದೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ತಲುಬೇಕಾದ ಆಂಬುಲೆನ್ಸ್‌ಗಳು ಟ್ರಾಫಿಕ್ ಜಾಮ್‌ಗಳಲ್ಲಿ ಸಿಲುಕಿ ತಡವಾಗಿ ಆಸ್ಪತ್ರೆಗೆ ತಲುಪುವುದರಿಂದ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆ.

ಅಪಘಾತ ತಡೆಯ ಸಬೂಬು!
ಚಿಕನ್‌ಸಾಲ್ ರಸ್ತೆಯಿಂದ ಹೊರಬರುವ ಮತ್ತು ನಗರ ಪ್ರವೇಶಿಸುವ ವಾಹನಗಳು ಸಂಗಮ್ ಸರ್ಕಲ್‌ನಲ್ಲಿ ತಿರುವು ಪಡೆದುಕೊಳ್ಳುವಾಗ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಯ ಮೇಲೆ ಪ್ರವೇಶ ಹಾದಿಗೆ ತಡೆಬೇಲಿ ಹಾಕಿದ್ದೇವೆ ಎಂದು ಪೊಲೀಸ್ ಇಲಾಖೆ ಪ್ರತಿಕ್ರಿಯಿಸಿದೆ. ಈ ಭಾಗದಲ್ಲಿ ಅಪಘಾತಗಳು ಹೆಚ್ಚುತ್ತಿದ್ದರೆ ಟ್ರಾಫಿಕ್ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಇಲ್ಲವಾದರೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅಪಘಾತಗಳನ್ನು ನಿಯಂತ್ರಿಸಬಹುದು. ಅದನ್ನು ಬಿಟ್ಟು ರಸ್ತೆಯನ್ನು ಬಂದ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುತ್ತಿದ್ದಾರೆ ಸಾರ್ವಜನಿಕರು.