ಪಡುಬಿದ್ರೆ: ಇಲ್ಲಿಗೆ ಸಮೀಪದ ಉಚ್ಚಿಲದಲ್ಲಿ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದು ಪ್ರಕ್ಷುಬ್ದ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗಡೆಯಾಗಿರುವ ಘಟನೆ ಸೋಮವಾರದಂದು ನಡೆದಿದೆ.
ಉಚ್ಚಿಲ ನಿವಾಸಿ ವಿಮಲಾ ಸಿ ಪುತ್ರನ್ ರವರಿಗೆ ಸೇರಿದ ಶ್ರೀ ಗಿರಿಜಾ ಎನ್ನುವ ದೋಣಿಯಲ್ಲಿ ಮೀನುಗಾರರು ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕಡಲು ಪ್ರಕ್ಷುಬ್ದಗೊಂಡು ದೋಣಿ ಮಗುಚಿ ಬಿದ್ದಿದೆ. ಇದನ್ನು ಕಂಡ ಅಲ್ಲೇ ಸಮೀಪದಲ್ಲಿದ್ದ ಮೀನುಗಾರರು ದೋಣಿಯಲ್ಲಿದ್ದ ಮೀನುಗಾರರ ನೆರವಿಗೆ ಧಾವಿಸಿ ಏಳು ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.
ದೋಣಿ ಮುಳುಗಡೆಯಾದ್ದರಿಂದ ದೋಣಿಯಲ್ಲಿದ್ದ ಬಲೆ ಮತ್ತು ಹೈಸ್ಪೀಡ್ ಇಂಜಿನ್ ಸಮುದ್ರ ಪಾಲಾಗಿದ್ದು, ದೋಣಿಗೆ ಹಾನಿಯಾಗಿದೆ. ಅಂದಾಜು 6.5 ಲಕ್ಷ ರೂ ನಷ್ಟವಾಗಿದೆ ಎನ್ನಲಾಗಿದೆ. ಕಾಪು ಶಾಸಕ ಲಾಲಾಜಿ ಮೆಂಡನ್ ಮೀನುಗಾರರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.