ದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳ ನಂತರ, ಹೊಸದಾಗಿ ಚುನಾಯಿತರಾದ ಇಬ್ಬರು ಕಾಂಗ್ರೆಸ್ ಕೌನ್ಸಿಲರ್ಗಳು ಮತ್ತು ಪಕ್ಷದ ನಾಯಕ ಅಲಿ ಮೆಹದಿ ತಮ್ಮ ಹಳೆಯ ಪಕ್ಷಕ್ಕೆ ಮರಳಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಮೆಹದಿ, ತಾನು ಆಪ್ ಗೆ ಸೇರುವ ಮೂಲಕ ತಪ್ಪು ಮಾಡಿದೆ ಮತ್ತು ತಾನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯ ನಿಷ್ಠಾವಂತ ಕಾರ್ಯಕರ್ತ ಎಂದು ಪ್ರತಿಪಾದಿಸಿದ್ದಾರೆ.
“ನಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ರಾಹುಲ್ ಗಾಂಧಿಯವರಲ್ಲಿ ಕೈಮುಗಿದು ಕ್ಷಮೆಯಾಚಿಸುತ್ತೇನೆ” ಎಂದು ಮೆಹದಿ ವೀಡಿಯೊದಲ್ಲಿ ಹೇಳಿದ್ದಾರೆ.
ಮೆಹದಿ ಮತ್ತು ಇಬ್ಬರು ಕೌನ್ಸಿಲರ್ಗಳಾದ ಸಬಿಲಾ ಬೇಗಂ ಮತ್ತು ನಾಜಿಯಾ ಖಾತೂನ್ ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು. ವಾರ್ಡ್ ಸಂಖ್ಯೆ 243, ಮುಸ್ತಫಾಬಾದ್ನಿಂದ ಸಬಿಲಾ ಗೆದ್ದರೆ, ಖಾತೂನ್ ವಾರ್ಡ್ ಸಂಖ್ಯೆ 245, ಬ್ರಿಜ್ ಪುರಿಯಿಂದ ಗೆದ್ದಿದ್ದಾರೆ.
ಮೆಹದಿ ಮತ್ತು ಇಬ್ಬರು ಕೌನ್ಸಿಲರ್ಗಳು ಆಪ್ ಗೆ ಸೇರಿದ ನಂತರ, ಮುಸ್ತಫಾಬಾದ್ ನಿವಾಸಿಗಳು ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಅವರ ಪ್ರತಿಕೃತಿಯನ್ನು ದಹಿಸಿದ್ದರು. ದೆಹಲಿಯ ಕಾಂಗ್ರೆಸ್ ಉಪಾಧ್ಯಕ್ಷ ಮುದಿತ್ ಅಗರ್ವಾಲ್ ಪಕ್ಷದ ಇತರ ಕೆಲವು ಕೌನ್ಸಿಲರ್ಗಳಿಗೂ”ಆಮಿಷ” ಒಡ್ಡಲು ಆಪ್ ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.