ಕುಂದಾಪುರ: ವಿ.ವಿ.ವಿ ಮಂಡಳಿ ಹೆಮ್ಮಾಡಿ, ಸಮರ್ಪಣಾ ಎಜ್ಯುಕೇಶನ್ ಟ್ರಸ್ಟ್ ಇವರ ಸಹಯೋಗದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ “ಜನತಾ ಕ್ರೀಡೋತ್ಸವ-2022” ಉದ್ಘಾಟನಾ ಕಾರ್ಯಕ್ರಮವು ಶನಿವಾರದಂದು ನೆರವೇರಿತು.
ಕೋಟ ವಿವೇಕ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಸಂತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ದಿನಕ್ಕೆ ಕನಿಷ್ಟ ಒಂದು ಗಂಟೆಯಷ್ಟು ಸಮಯವನ್ನು ಕ್ರೀಡೆಗೆ ವಿನಿಯೋಗಿಸಬೇಕು. ಕ್ರೀಡೆ ನಮ್ಮ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ದಿಸುತ್ತದೆ. ಉತ್ತಮ ಆರೋಗ್ಯ, ಮನೋರಂಜನೆ ಮತ್ತು ಏಕಾಗ್ರತೆಗಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಪುನರಾರಂಭಗೊಂಡ ಅಲ್ಪಕಾಲದಲ್ಲೇ ಬಹಳಷ್ಟು ಸಾಧನೆಗಳನ್ನು ಮಾಡಿದೆ. ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾಟವನ್ನು ಯಶಸ್ವಿಯಾಗಿ ಮುನ್ನಡೆಸುವುದರ ಜೊತೆಗೆ ಪಠ್ಯ ಮತ್ತು ಪಠ್ಯೇತರ ಚಡುವಟಿಕೆಗಳಲ್ಲೂ ಸೈ ಎನಿಸಿಕೊಂಡಿದೆ. ಇಂದಿನ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದರ ಮೂಲಕ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಹಾರೈಸಿದರು.
ಸಮರ್ಪಣಾ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಮತ್ತು ಪ್ರಾಂಶುಪಾಲ ಗಣೇಶ್ ಮೊಗವೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಟ್‍ಬೇಲ್ತೂರು ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜ್ ಎಸ್ ಪುತ್ರನ್, ಜನತಾ ಪಿಯು ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕಿ ಚಿತ್ರಾ ಕಾರಂತ್, ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ, ಗ್ರಾಮಾಂತರ ಠಾಣೆಯಯ ಎಎಸ್‍ಐ ವಿಶ್ವನಾಥ, ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ಭಾಗವಹಿಸಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಸ್ವಾಗತಿಸಿದರು. ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ವಂದಿಸಿ, ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು.












