ಹಾಡುಹಗಲೇ ಮನೆಯೊಳಗೆ ನುಗ್ಗಿ ವೈದ್ಯೆಯನ್ನು ಅಪಹರಿಸಿದ ಯುವಕರ ಗುಂಪು: ತೆಲಂಗಾಣದ ರಂಗಾ ರೆಡ್ಡಿಯಲ್ಲಿ ಬೆಚ್ಚಿಬೀಳಿಸುವ ಘಟನೆ

ರಂಗಾರೆಡ್ಡಿ: ಶುಕ್ರವಾರದಂದು ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾ ಪ್ರದೇಶದಲ್ಲಿ 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಬಲವಂತವಾಗಿ ಕರೆದೊಯ್ದ ಪುರುಷರ ಗುಂಪೊಂದು ಆಕೆಯ ಮನೆಯನ್ನು ಧ್ವಂಸಗೊಳಿಸಿ ಆಕೆಯ ತಂದೆಯನ್ನು ಥಳಿಸಿದೆ. ಈ ಭಯಾನಕ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ ಮತ್ತು ಕೈಯಲ್ಲಿ ಕೋಲುಗಳನ್ನು ಹಿಡಿದಿರುವ ಅನೇಕ ಪುರುಷರ ಗುಂಪೊಂದು ಕಾರನ್ನು ಧ್ವಂಸಗೊಳಿಸುತ್ತಿರುವ, ಯುವತಿಯ ತಂದೆಯನ್ನು ಥಳಿಸುತ್ತಿರುವ ಮತ್ತು ಮನೆಗೆ ನುಗ್ಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಸುಮಾರು 100 ಯುವಕರು ಮನೆಗೆ ನುಗ್ಗಿ ತಮ್ಮ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಯುವತಿಯನ್ನು24 ವರ್ಷದ ವೈಶಾಲಿ ಎಂದು ಗುರುತಿಸಲಾಗಿದ್ದು, ವೈದ್ಯೆಯಾಗಿರುವ ಈಕೆಯನ್ನು ರಕ್ಷಿಸಲಾಗಿದೆ. “ಸಂತ್ರಸ್ತೆಯನ್ನು ಅಪಹರಿಸಿದ ನಂತರ ಆಕೆಯನ್ನು ಆರೋಪಿಗಳು ಥಳಿಸಿ ಬೆದರಿಕೆ ಹಾಕಿದ್ದಾರೆ” ಎಂದು ರಾಚಕೊಂಡ ಪೊಲೀಸರು ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.

ಇದು ಕೇವಲ ಅಪಹರಣ ಪ್ರಕರಣ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆರೋಪಿಗಳು ಯುವತಿಯನ್ನು ಆಕೆಯ ಮಲಗುವ ಕೋಣೆಯಿಂದ ಬಲವಂತವಾಗಿ ಹೊರಗೆ ಕರೆದೊಯ್ದು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದಾರೆ. ಘಟನೆ ಬಗ್ಗೆ ಪೊಲೀಸರು ತಕ್ಷಣ ಸ್ಪಂದಿಸಿಲ್ಲ ಎಂದು ಯುವತಿಯ ಹೆತ್ತವರು ಆರೋಪಿಸಿದ್ದಾರೆ ಎಂದು ಮಾಧ್ಯಮ ವರದಿಯಾಗಿದೆ.

Image
Image: ANI

ಇದೊಂದು ಪೂರ್ವ ಯೋಜಿತ ಕೃತ್ಯ. ಯುವತಿ ಆಘಾತಕ್ಕೊಳಗಾಗಿದ್ದಾರೆ ಮತ್ತು ಆಕೆಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಪ್ರಧಾನ ಆರೋಪಿ ನವೀನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದ್ದು ಇತರರಿಗಾಗಿ ಶೋಧ ನಡೆಯುತ್ತಿದೆ ಎನ್ನಲಾಗಿದೆ.

“307 ಐಪಿಸಿ ಸೇರಿದಂತೆ ಗಂಭೀರ ಅಪರಾಧಗಳ ಅಡಿಯಲ್ಲಿ ನಾವು ಆರೋಪಿಗಳನ್ನು ದಾಖಲಿಸುತ್ತಿದ್ದೇವೆ” ಎಂದು ರಾಚಕೊಂಡ ಹೆಚ್ಚುವರಿ ಸಿಪಿ ಸುಧೀರ್ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.