ಮಂಗಳೂರಿನ ಕಾಲೇಜಿನಲ್ಲಿ ಬುರ್ಖಾ ಧರಿಸಿ ನೃತ್ಯ: ನಾಲ್ಕು ವಿದ್ಯಾರ್ಥಿಗಳ ಅಮಾನತು

ಮಂಗಳೂರು: ಇಲ್ಲಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ನಾಲ್ಕು ವಿದ್ಯಾರ್ಥಿಗಳು ಹಿಂದಿ ಸಿನಿಮಾದ ಹಾಡೊಂದಕ್ಕೆ ಬುರ್ಖಾ ಧರಿಸಿ ನೃತ್ಯ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ನಾಲ್ಕು ವಿದ್ಯಾರ್ಥಿಗಳು ಬುರ್ಖಾ ಧರಿಸಿ ನೃತ್ಯ ಮಾಡುವ ವೀಡಿಯೋ ಬಗ್ಗೆ ವಿವಾದವೆದ್ದ ಕೂಡಲೆ ಕಾಲೇಜಿನ ಆಡಳಿತ ಮಂಡಳಿ ನಾಲ್ಕೂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.

ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಆಡಳಿತ ಮಂಡಳಿಯು ಟ್ವೀಟ್ ಮಾಡಿ, ವೀಡಿಯೋದಲ್ಲಿ ಬುರ್ಖಾ ಧರಿಸಿ ನೃತ್ಯ ಮಾಡುವ ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರೇ ಆಗಿದ್ದು,  ವಿದ್ಯಾರ್ಥಿ ಸಂಘಟನೆಯ ಉದ್ಘಾಟನೆಯ ಅನೌಪಚಾರಿಕ ಭಾಗದ ಸಂದರ್ಭದಲ್ಲಿ  ಅವರು ಏಕಾಏಕಿ ವೇದಿಕೆಗೆ ನುಗ್ಗಿ ನೃತ್ಯ ಮಾಡಲು ಶುರುವಿಟ್ಟುಕೊಂಡರು. ಈ ನೃತ್ಯವು ಪೂರ್ವ ನಿರ್ಧಾರಿತ ಕಾರ್ಯಕ್ರಮದ ಭಾಗವಾಗಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ವಿಚಾರಣೆ ನಡೆಯುವವರೆಗೆ ವಿದ್ಯಾರ್ಥಿಗಳನ್ನು ಅಮಾನತಿನಲ್ಲಿಡಲಾಗಿದೆ. ಸಮುದಾಯಗಳ ಮಧ್ಯೆ ಇರುವ ಸೌಹಾರ್ದತೆಯನ್ನು ಕೆಡಿಸುವ ಯಾವುದೇ ಚಟುವಟಿಕೆಯನ್ನು ಕಾಲೇಜು ಬೆಂಬಲಿಸುವುದಿಲ್ಲ ಮತ್ತು ಅಂತಹವರನ್ನು ಕ್ಷಮಿಸುವುದಿಲ್ಲ ಎಂದು ಕಾಲೇಜು ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.