ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿರುವುದು ಜನತೆ ನರೇಂದ್ರ ಮೋದಿ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ: ಪ್ರಮೋದ್ ಮಧ್ವರಾಜ್

ಉಡುಪಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪಕ್ಷದ ಗೆಲುವಿಗೆ ಸಂತೋಷ ವ್ಯಕ್ತಪಡಿಸಿದರು.

ಗುಜರಾತ್ ನಲ್ಲಿ ಸತತ 27 ವರ್ಷದಿಂದ ಬಿಜೆಪಿ ಆಡಳಿತವಿದ್ದು, ಮತ್ತೆ ಮುಂದಿನ 5 ವರ್ಷಗಳಿಗೆ ಅಭೂತಪೂರ್ವ ಬೆಂಬಲದೊಂದಿಗೆ ಪಕ್ಷ ಅಧಿಕಾರಕ್ಕೆ ಬಂದಿದ್ದು, ಇದು ಪಧಾನಿ ನರೇಂದ್ರ ಮೋದಿಯವರ ಮೇಲೆ ಜನತೆ ಸಂಪೂರ್ಣ ವಿಶ್ವಾಸ ಇಟ್ಟಿರುವ ಪ್ರತೀಕ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ 27 ವರ್ಷ ಆಡಳಿತ ನಡೆಸಿ, ಮತ್ತೆ ಮುಂದಿನ ಬಾರಿಗೆ ಭಾರಿ ಬಹುಮತ ಪಡೆದುಕೊಂಡಿರುವ ಚುನಾವಣಾ ಸಾಧನೆ ಬಹುಶಃ ಬೇರೆ ಯಾವ ರಾಜ್ಯದಲ್ಲೂ ನಡೆದಿಲ್ಲ. ಜನತೆ ಇನ್ನೊಮ್ಮೆ ಸಂಪೂರ್ಣವಾಗಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿರಿಸಿದ್ದಾರೆ ಎನ್ನುವುದನ್ನು ಇದು ದೃಢೀಕರಿಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನ ಇಂದಿನ ಹೀನಾಯ ಸ್ಥಿತಿಗೆ ಕೇಂದ್ರ ಮತ್ತು ಬುಡ ಮಟ್ಟದಲ್ಲಿ ನಾಯಕತ್ವದ ಕೊರತೆ ಕಾರಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.