ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ವಿದ್ಯಾರ್ಥಿಗಳು ಬುಧವಾರ ಪ್ರದರ್ಶಿಸಿದ ಸಾದತ್ ಹಸನ್ ಮಂಟೋ, ಹೆರಾಲ್ಡ್ ಪಿಂಟರ್ ಮತ್ತು ಸುರೇಂದ್ರ ವರ್ಮಾ ಅವರ ಮೂರು ಕಿರುನಾಟಕಗಳು ಆಧುನಿಕ ಜೀವನದ ಸಂಕೀರ್ಣತೆಯ ಬಗ್ಗೆ ಪ್ರೇಕ್ಷಕರನ್ನು ಯೋಚಿಸುವಂತೆ ಮಾಡಿತು.
ಮೂರು ಕಿರುನಾಟಕಗಳಾದ ಉಪರ್ ನೀಚೆ ಔರ್ ದರ್ಮಿಯಾನ್ (ಸಾದತ್ ಹಸನ್ ಮಂಟೋ), ವಿಕ್ಟೋರಿಯಾ ಸ್ಟೇಷನ್ (ಹೆರಾಲ್ಡ್ ಪಿಂಟರ್), ನೀಂದ್ ಕ್ಯುನ್ ರಾತ್ ಭರ್ ನಹಿ ಆತಿ(ಸುರೇಂದ್ರ ವರ್ಮ)ನ್ನು ರಂಗ ನಿರ್ದೇಶಕರಾದ ಅಭಿನವ್ ಗ್ರೋವರ್ ನಿರ್ದೇಶಿಸಿದ್ದು ಎರಡನೇ ವರ್ಷದ ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) ವಿದ್ಯಾರ್ಥಿಗಳಾದ- ವೆಲಿಕಾ, ಚಿನ್ಮಯಿ ಬಾಲ್ಕರ್, ಆಲಿಸ್ ಚೌಹಾಣ್, ಶ್ರವಣ್ ಬಾಸ್ರಿ, ಆಕರ್ಷಿಕಾ ಸಿಂಗ್, ಸಾತ್ವಿಕ್ ಜೋಷಿ ಮತ್ತು ಸುಹಾನಿ ನಟಿಸಿದರು.
ಶ್ರುತಿ ಬಂಗೇರ ಬೆಳಕು ಸಂಯೋಜನೆ ಮತ್ತು ಸಂಪದ ಭಾಗವತರ ಸಂಗೀತ ನೀಡಿದ್ದರು.
ಪ್ರದರ್ಶನದ ನಂತರ ನಡೆದ ಚರ್ಚೆಯಲ್ಲಿ ಭಾಗವಹಿಸಿದ ರಂಗನಿರ್ದೇಶಕ ಅಭಿನವ್ ಗ್ರೋವರ್, ಮೂರು ನಾಟಕಗಳ ವಿಷಯಗಳು ಪ್ರಾಥಮಿಕವಾಗಿ ಆಧುನಿಕ ಬದುಕಿನ ಸಂದಿಗ್ಧತೆಗಳ ಬಗ್ಗೆ ಎಲ್ಲರೂ ಯೋಚಿಸುವಂತೆ ಮಾಡುವ ಉದ್ದೇಶವನ್ನು ಹೊಂದಿವೆ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಅಭಿನಯ ಮತ್ತು ರಂಗಭೂಮಿಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನ ಇದಾಗಿದೆ ಎಂದರು.
150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರು ನಾಟಕಗಳನ್ನು ವೀಕ್ಷಿಸಿ, ಚರ್ಚೆಯಲ್ಲಿ ಭಾಗವಹಿಸಿದರು.