ಉಡುಪಿ: ಕೊಡವೂರು ನಗರಸಭಾ ಸದಸ್ಯ ವಿಜಯ ಕೊಡವೂರು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹಾಗೂ ಸ್ವಉದ್ಯೋಗಕ್ಕೆ ಅನುಕೂಲವಾಗುವಂತೆ ನ.26ರಂದು ಕೊಡವೂರಿನ ಅಣ್ಣಪ್ಪ ಶೆಟ್ಟಿ ಜುಮಾದಿನಗರ ಇವರ ಮನೆಯಲ್ಲಿ ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದ್ದರು
ಕಾರ್ಯಕ್ರಮದಲ್ಲಿ ಉಡುಪಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಹಾಗೂ ಹಿರಿಯಡ್ಕ ಕಾಮಧೇನು ನರ್ಸರಿಯ ದಯಾನಂದ್ ಗಾಣಿಗ ಇವರು ಮಲ್ಲಿಗೆ ಬೆಳೆಯುವ ವಿಧಾನ , ಮಾರುಕಟ್ಟೆಯ ಅವಕಾಶಗಳು, ಆರ್ಥಿಕ ಸಹಾಯ ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 23 ಜನ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ತರಬೇತಿ ಕಾರ್ಯಕ್ರಮದ ನಂತರ ಪ್ರೇರಣೆಗೊಂಡ ಕೆಲವು ಮಹಿಳೆಯರು ತಾವೂ ಮಲ್ಲಿಗೆ ಬೆಳೆದು ಆ ಮೂಲಕ ಹೆಚ್ಚುವರಿ ಧನಾರ್ಜನೆ ಮಾಡುವುದಾಗಿ ಭರವಸೆಯಿಂದ ನುಡಿದರು. ಮುಂದಿನ ದಿನಗಳಲ್ಲಿ ವಿವಿಧ ಗ್ರಾಮಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸ್ಥಳೀಯ ಮಹಿಳೆಯರನ್ನು ಒಟ್ಟು ಸೇರಿಸಿ ಇತರರಿಗೂ ಮ್ಲಲಿಗೆ ಬೆಳೆಯ ಮಾಹಿತಿ ಹಾಗೂ ಬೆಳೆಯಲು ಅಗತ್ಯವಿರುವ ಪೂರಕ ತರಬೇತಿ ಹಾಗೂ ಸಸಿಗಳನ್ನು ವಿತರಿಸುವ ಬಗ್ಗೆ ಚಿಂತಿಸಲಾಯಿತು ಸಂಘ ಸಂಸ್ಥೆಗಳ ಹಾಗೂ ದಾನಿಗಳ ಸಹಭಾಗಿತ್ವದಲ್ಲಿ ಮಲ್ಲಿಗೆ ಸಸಿ ಕೊಡಿಸುವ ಬಗ್ಗೆ ಚಿಂತನೆ ನಡೆಸಲಾಯಿತು. ಭವಿಷ್ಯದಲ್ಲಿ ರೈತರಿಗೆ ಸಾವಯವ ಕೃಷಿ ಮಾಹಿತಿಯನ್ನೂ ನೀಡಿ ರಾಸಾಯನಿಕ ಮುಕ್ತ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನೂ ನಡೆಸುವ ಬಗ್ಗೆ ವಿಜಯ ಕೊಡವೂರು ಮಾಹಿತಿ ನೀಡಿದರು.
ಮಹಿಳಾ ಸಮಿತಿ ಅಧ್ಯಕ್ಷೆ ಚಂದ್ರಾವತಿ, ಕೃಷಿ ಸಮಿತಿ ಕೊಡವೂರು ಪ್ರಮುಖ ಅರುಣ್, ತೋಮ ಪೂಜಾರಿ,ಸ್ಥಳೀಯ ಕೃಷಿಕ ನವೀನ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.