ಉಡುಪಿ: ಪ.ಪೂ. ಶಿಕ್ಷಣ ಇಲಾಖೆ ಮತ್ತು ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ.ಪೂ. ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಇಲ್ಲಿ ನವೆಂಬರ್ 29 ರಂದು ಜರುಗಿತು. ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷದ ದಾಖಲೆಗಳನ್ನು ಮುಂದಿನ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮುರಿದವರಿಗೆ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ (ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು)ನ ವತಿಯಿಂದ ತಲಾ 2 ಸಾವಿರ ನಗದು ಬಹುಮಾನವನ್ನು ನೀಡಲಾಗುವುದು. ಜಿಲ್ಲಾ ಮಟ್ಟದ ಪದಕ ವಿಜೇತರು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲ್ ಕೆ.ಎಂ.ಸಿಯ ಡೀನ್ ಡಾ.ಶರತ್ ರಾವ್ ಮಾತನಾಡಿ, ಕ್ರೀಡೆ ಮಕ್ಕಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಅಲ್ಲದೆ ಇಲ್ಲಿ ಬರುವ ಸೋಲು ಗೆಲುವುಗಳು ನಮ್ಮ ಮುಂದಿನ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಪಾಠವಾಗಬೇಕು. ಗೆದ್ದವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಸೋತವರು ಪ್ರಯತ್ನ ಕೈ ಬಿಡದೆ ಶ್ರದ್ಧೆಯಿಂದ ಅಭ್ಯಾಸ ಮುಂದುವರಿಸಿದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ. ಕ್ರೀಡೆ ಮತ್ತು ಇತರ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸಾಮಾಜಿಕ ಬದುಕಿಗೆ ಅಣಿಗೊಳಿಸುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಹಕಾರಿ ರತ್ನ ಪ್ರಶಸ್ತಿ ವಿಜೇತ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಯಶಪಾಲ್ ಎ ಸುವರ್ಣ ಮಾತನಾಡಿ, ಪಠ್ಯ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಜೊತೆಜೊತೆಗೆ ಅವಕಾಶ ಕಲ್ಪಿಸಿಕೊಡುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಪ.ಪೂ.ಶಿಕ್ಷಣ ಇಲಾಖೆಯ ಜೊತೆ ಕೈ ಜೋಡಿಸಿ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ನೂರನಲ್ವತ್ತು ಕೋಟಿ ಜನಸಂಖ್ಯೆಯುಳ್ಳ ನಮ್ಮ ಭಾರತ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಇನ್ನಷ್ಟು ಸಾಧಿಸಬೇಕಾದ ಅವಶ್ಯಕತೆಯಿದೆ ಎಂದರು.
ಉಡುಪಿ ಎಮ್.ಜಿ. ಎಮ್. ಪದವಿಪೂರ್ವ ಕಾಲೇಜು ಸಮಗ್ರ ತಂಡ ಪ್ರಶಸ್ತಿ ಪಡೆಯಿತು.
ಬಾಲಕರ ವಿಭಾಗದಲ್ಲಿ ನಿಟ್ಟೆ ಎನ್.ಎಸ್.ಎ.ಎಮ್ ಪದವಿಪೂರ್ವ ಕಾಲೇಜಿನ ಕುಲ್‌ದೀಪ್ ಕುಮಾರ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಎನ್.ಎಸ್.ಎ.ಎಮ್ ಪದವಿಪೂರ್ವ ಕಾಲೇಜಿನ ನಂದಿನಿ ಹಾಗು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮಾಧುರ‍್ಯ ಇವರಿಬ್ಬರು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರು.
ಸಮಾರಂಭದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಕುಮಾರ್ ಎ, ಉಡುಪಿ ಜಿಲ್ಲಾ ಪ.ಪೂ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಉಡುಪಿ ಜ್ಞಾನಸುಧಾ ಪ.ಪೂ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಪ.ಪೂ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ ಕೊಡವೂರು ಸ್ವಾಗತಿಸಿದರು. ಪ.ಪೂ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್ ಎ ವಂದಿಸಿದರು. ಕಾರ್ಕಳ ಜ್ಞಾನಸುಧಾ ಪ.ಪೂ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿಯಾದ ಶ್ರೀಮತಿ ಸಂಗೀತ ಕಾರ್ಯಕ್ರಮ ನಿರೂಪಿಸಿದರು.












