ಮಾಹೆ ಜಿಸಿಪಿಎಎಸ್ ನಲ್ಲಿ ಗಾಂಧಿ ಇಲ್ಲಸ್ಟ್ರೇಟೆಡ್ ಫಾರ್ ಕಿಡ್ಸ್ ಪುಸ್ತಕ ಬಿಡುಗಡೆ

ಮಣಿಪಾಲ: ಜಗತ್ತಿನ ಉಪಭೋಗವಾದದ ಮನೋಭಾವ ಪರಿಸರದ ಜೀವಾಳವನ್ನೇ ಭಕ್ಷಿಸುತ್ತಿರುವ ಮತ್ತು ಹಿಂಸಾಚಾರವು ವಿಪರೀತವಾಗುತ್ತಿರುವ ಈ ಕಾಲಕ್ಕೆ ಮಹಾತ್ಮ ಗಾಂಧಿಯವರು ಹೆಚ್ಚು ಪ್ರಸ್ತುತವಾಗುತ್ತಾರೆ ಎಂದು ಪರಿಸರವಾದಿ ಮಮತಾ ರೈ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಬಹುರೂಪಿ ಮತ್ತು ವಿವಿಡ್ ಲಿಪಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಲಾವಿದ ಗುಜ್ಜಾರ್ ಅವರ ಮಕ್ಕಳಿಗಾಗಿ ಗಾಂಧಿ ಮತ್ತು ಗಾಂಧಿ ಇಲ್ಲಸ್ಟ್ರೇಟೆಡ್ ಫಾರ್ ಕಿಡ್ಸ್ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಇಂದು ಬಿಡುಗಡೆಯಾಗಿರುವ ಸಚಿತ್ರ ಪುಸ್ತಕಗಳು ಮಕ್ಕಳಿಗೆ ಅತ್ಯಂತ ಸೂಕ್ತವಾಗಿದ್ದು, ಅವು ಹೆಚ್ಚು ಮಕ್ಕಳನ್ನು ತಲುಪಬೇಕು ಎಂದು ಅವರು ಹಾರೈಸಿದರು.

ಗಾಂಧೀಜಿಯ ನೆನಪುಗಳನ್ನು ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಗಾಂಧಿಜಿ ಅವರಿಗೆ ಅಂತರಾಷ್ಟ್ರೀಯ ಮನ್ನಣೆಯೂ ಹೆಚ್ಚುತ್ತಿದೆ ಎಂದು ಪತ್ರಕರ್ತ ಜಿ ಎನ್ ಮೋಹನ್ ಹೇಳಿದರು.

ಯಾವುದೇ ಪರಿಣಾಮಕಾರಿ ಬದಲಾವಣೆ ಮಕ್ಕಳಿಂದಲೇ ಆರಂಭವಾಗಬೇಕು ಎಂದು ಸ್ವತಃ ಗಾಂಧಿಯವರು ನಂಬಿದ್ದರು. ಆದ್ದರಿಂದಲೇ ಈ ಪುಸ್ತಕಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಪುಸ್ತಕಗಳ ಲೇಖಕ-ಚಿತ್ರಕಾರ ಕಲಾವಿದ ಗುಜ್ಜಾರ್ ಹೇಳಿದರು.

ಗಾಂಧಿ ಮತ್ತು ಅಂಬೇಡ್ಕರ್ ಅವರ ಮಾರ್ಗಗಳಲ್ಲಿ ‘ಮಾತು ಮತ್ತು ಕೃತಿ’ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯಬೇಕು ಎಂದು ಪತ್ರಕರ್ತ ರಾಜಾರಾಂ ತಲ್ಲೂರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿ, ಪರಿಸರ ಅಧ್ಯಯನ ಮತ್ತು ಶಾಂತಿ ಅಧ್ಯಯನದಲ್ಲಿ ಗಾಂಧಿಜಿಯವರ ತತ್ವಗಳನ್ನು ನಿರ್ವಹಿಸುವುದು ಮಹತ್ವದ್ದಾಗಿದೆ ಎಂದರು.

ನಂತರ ಕಾರ್ಟೂನ್ ಪ್ರಾತ್ಯಕ್ಷಿಕೆಯನ್ನು ನಡೆಸಿದ ಗುಜ್ಜಾರ್, ವ್ಯಂಗ್ಯಚಿತ್ರ ಮತ್ತು ಕಾರ್ಟೂನ್ ನಡುವೆ ಇರುವ ವ್ಯತ್ಯಾಸವನ್ನು ಉಲ್ಲೇಖಿಸಿದರು. ವ್ಯಂಗ್ಯಚಿತ್ರವು ವ್ಯಕ್ತಿಯ ಕೆಲವು ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತದೆ ಮತ್ತು ಕಾರ್ಟೂನ್ ಸಮಾಜದ ವಿಡಂಬನೆಯಾಗಿದೆ ಎಂದರು.

ಶ್ರಾವ್ಯ ಬಾಸ್ರಿ ವೈಷ್ಣವ ಜನತೋ ಮತ್ತು ಇದರ ಕನ್ನಡಾನುವಾದವನ್ನು ಹಾಡಿದರು. ಜಿಸಿಪಿಎಎಸ್ ವಿದ್ಯಾರ್ಥಿಗಳಾದ ಅಪರ್ಣಾ ಪರಮೇಶ್ವರನ್ ಸ್ವಾಗತಿಸಿ, ಗೌತಮಿ ಕಾಕತ್ಕರ್ ಕಾರ್ಯಕ್ರಮ ನಿರೂಪಿಸಿದರು.