ಬೆಂಗಳೂರು: ಕಲಬುರಗಿ, ಯಾದಗರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಸರ್ಕಾರಿ ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮೂರು ತಿಂಗಳ ರಾಜ್ಯ ವಕ್ಫ್ ಬೋರ್ಡ್ ಮುಸ್ಲಿಂ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸುವ ನಿರ್ಣಯ ಕೈಗೊಂಡಿದ್ದು ಒಂದೂವರೆ ತಿಂಗಳ ಹಿಂದೆ ಸರ್ಕಾರದಿಂದ ಇದಕ್ಕೆ ಅನುಮೋದನೆಯೂ ಸಿಕ್ಕಿತ್ತು. ಪ್ರತಿ ಕಾಲೇಜಿಗೆ 2.5 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲಾಗುತ್ತದೆ.
ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯಲ್ಲೇ ಈ ಕಾಲೇಜುಗಳು ತಲೆ ಎತ್ತಲಿವೆ. ಶಂಕುಸ್ಥಾಪನೆ ನೆರವೇರಿದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರಥಮ ಪಿಯುಸಿ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ದ್ವಿತೀಯ ಪಿಯುಸಿ, ಹೀಗೆ ಪದವಿ ಹಂತದವರೆಗೆ ಇದನ್ನು ವಿಸ್ತರಿಸಲಾಗುತ್ತದೆ.