ಮಂಗಳೂರು: ಬಾಲಕಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ ಆರೋಪದ ಮೇಲೆ ಮಹಿಳಾ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆ ಶಿವಾನಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಖಲೀಲ್, ಡಾ ಜಮೀಲಾ ಮತ್ತು ಐಮನ್ ವಿರುದ್ಧ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕಾಯ್ದೆ 2022 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಶಿವಾನಿ ಖಲೀಲ್ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ತನ್ನ ಮೊಬೈಲ್ ಫೋನ್ ರೀಚಾರ್ಜ್ ಮಾಡುತ್ತಿದ್ದಳು. ಖಲೀಲ್ ಅವಳೊಂದಿಗೆ ಸ್ನೇಹ ಬೆಳೆಸಿ ಆಕೆಗೆ ಒಳ್ಳೆಯ ಕೆಲಸ ಮತ್ತು ಹಣ ನೀಡುವ ಭರವಸೆ ನೀಡಿ ಪುಸಲಾಯಿಸಿದ್ದನು. ಆ ಬಳಿಕ ಆಕೆಯನ್ನು ತನ್ನ ಸಂಬಂಧಿಕರ ಮನೆಗೆ ಕರೆದೊಯ್ದು, ಅಲ್ಲಿ ಅವಳನ್ನು ನಮಾಜ್ ಮಾಡಲು ಮತ್ತು ಕುರಾನ್ ಪಠಿಸಲು ಒತ್ತಾಯಿಸಿದ್ದಾನೆ. ಅಲ್ಲದೇ ಆಕೆಯ ಹೆಸರನ್ನು ಆಯಿಷಾ ಎಂದು ಬದಲಾಯಿಸಿದ್ದಾನೆ. ಮಾತ್ರವಲ್ಲ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ನಂತರ, ಬೇರೆ ಕೆಲಸಕ್ಕಾಗಿ ಆಕೆಯನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲಾಗಿದೆ. ಮಗಳು ಡಾ.ಜಮೀಲಾ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿ ಬುರ್ಖಾ ಧರಿಸುವಂತೆ ಒತ್ತಾಯಿಸಿದ್ದಾರೆ. ಅದೇ ಸಮಯದಲ್ಲಿ, ಐಮನ್ ಎಂಬ ವ್ಯಕ್ತಿ ತನ್ನ ಇನ್ಸ್ಟಾಗ್ರಾಮ್ನಲ್ಲಿ ಅವಳನ್ನು ಸಂಪರ್ಕಿಸಿ ಆತನೊಂದಿಗೆ ಸಂಬಂಧ ಬೆಳೆಸಲು ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಆರೋಪದ ಮೇಲೆ ಖಲೀಬ್, ಡಾ ಜಮೀಲಾ ಮತ್ತು ಐಮಾನ್ ವಿರುದ್ಧ ಶಿವಾನಿ ಈಗ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.