ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಗುರುವಾರದಂದು ರಾತ್ರಿ ಬಸದಿಯಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಮುಕ್ತಾಯವಾದವು. ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ, ಶ್ರುತದೇವಿ ಹಾಗೂ ಗಣಧರ ಪರಮೇಷ್ಠಿಗಳ ಅಷ್ಟವಿಧಾರ್ಚನೆ ಪೂಜೆ ಸುಶ್ರಾವ್ಯ ಗಾಯನದೊಂದಿಗೆ ಸಂಪನ್ನಗೊಂಡಿತು.
ಬಾಹುಬಲಿ ಸೇವಾ ಸಮಿತಿಯ ಶ್ರಾವಕರು, ಶ್ರಾವಕಿಯರಿಂದ ಸುಶ್ರಾವ್ಯವಾಗಿ ಭಕ್ತಿಗೀತೆಗಳ ಗಾಯನ ಪೂಜೆಗೆ ವಿಶೇಷ ಮೆರುಗನ್ನು ನೀಡಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಷಟ್ಕಂಡಾಗಮಾಧಾರಿತ ಸಿದ್ಧಾಂತ ಚಿಂತಾಮಣಿಗ್ರಂಥವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಶುಕ್ರವಾರದಂದು ಹೆಗ್ಗಡೆಯವರ 74ನೇ ಜನ್ಮದಿನವನ್ನು ಶ್ರೀಕ್ಷೇತ್ರದಲ್ಲಿ ಸರಳವಾಗಿಆಚರಿಸಲಾಯಿತು. ದೇವಳದ ಸಿಬ್ಬಂದಿಗಳು, ಸಾರ್ವಜನಿಕರು, ಭಕ್ತರು, ಅಭಿಮಾನಿಗಳು ಜನ್ಮದಿನಕ್ಕೆ ಶುಭ ಹಾರೈಸಿದರು. ಸಮಾಜದ ಗಣ್ಯರು ಮತ್ತು ಜನಪ್ರಿನಿಧಿಗಳು ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ.