ಕೂಚಿಪುಡಿ ನೃತ್ಯೋತ್ಸವದಲ್ಲಿ ಅನೌಷ್ಕಾ ಸುನಕ್ ಭಾಗಿ: ಭಾರತವೆಂದರೆ ನನಗಿಷ್ಟ ಎಂದ ಪೋರಿ

ಲಂಡನ್: ಭಾರತವು ನನ್ನ ಕುಟುಂಬ, ಮನೆ ಮತ್ತು ಸಂಸ್ಕೃತಿ ಒಟ್ಟಿಗೆ ಬೆರೆತಿದೆ ಮತ್ತು ನಾನು ಪ್ರತಿ ವರ್ಷ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ ಎಂದು ಲಂಡನ್‌ನಲ್ಲಿ ನಡೆದ ಕೂಚಿಪುಡಿ ನೃತ್ಯ ಉತ್ಸವ – ರಂಗ್ 2022 ರಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನೌಷ್ಕಾ ಸುನಕ್ ಹೇಳಿದ್ದಾರೆ.

ಖ್ಯಾತ ಕೂಚಿಪುಡಿ ನರ್ತಕಿ ಅರುಣಿಮಾ ಕುಮಾರ್ ಅವರು ಸಂಯೋಜಿಸಿದ್ದ ನೃತ್ಯೋತ್ಸವದಲ್ಲಿ, 4 ರಿಂದ 85 ವರ್ಷ ವಯಸ್ಸಿನ ಪ್ರಪಂಚದಾದ್ಯಂತದ 100 ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಭಾರತದ 75 ನೇ ಸ್ವಾತಂತ್ರ್ಯೋತ್ಸವವನ್ನು ಗುರುತಿಸಲು ನೃತ್ಯೋತ್ಸವ ಅನ್ನು ಆಯೋಜಿಸಲಾಗಿದೆ.

ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನುಷ್ಕಾ ಅವರು ನೃತ್ಯದ ಮೇಲಿನ ಪ್ರೀತಿಯ ಬಗ್ಗೆ ಮಾತನಾಡುತ್ತಾ, “ನಾನು ಕೂಚಿಪುಡಿ ಮತ್ತು ನೃತ್ಯವನ್ನು ಪ್ರೀತಿಸುತ್ತೇನೆ, ಏಕೆಂದರೆ ನೀವು ನೃತ್ಯ ಮಾಡುವಾಗ ನಿಮ್ಮ ಎಲ್ಲಾ ಚಿಂತೆಗಳು ಮತ್ತು ಒತ್ತಡಗಳು ದೂರವಾಗುತ್ತವೆ ಮತ್ತು ನಿಮ್ಮ ಪಕ್ಕದಲ್ಲಿರುವ ನಿಮ್ಮ ಎಲ್ಲ ಸ್ನೇಹಿತರ ಜೊತೆ ನೃತ್ಯದ ಕ್ಷಣದಲ್ಲಿ ಜೀವಿಸುತ್ತೀರಿ. ನಾನು ವೇದಿಕೆಯಲ್ಲಿರಲು ಇಷ್ಟಪಡುತ್ತೇನೆ” ಎಂದಿದ್ದಾರೆ.

ಭಾರತದ ಬಗ್ಗೆ ಮಾತನಾಡುತ್ತಾ, “ಭಾರತವು ನಾನು ಬಂದ ದೇಶವಾಗಿದೆ. ಇದು ಕುಟುಂಬ, ಮನೆ ಮತ್ತು ಸಂಸ್ಕೃತಿ ಒಟ್ಟಿಗೆ ಬೆರೆತಿರುವ ಜಾಗವಾಗಿದೆ. ನಾನು ಪ್ರತಿ ವರ್ಷ ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ” ಎಂದು ಅನೌಷ್ಕಾ ಸುನಕ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ತಾಯಿ ಅಕ್ಷತಾ ಮೂರ್ತಿ, ಸುನಕ್ ಹೆತ್ತವರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.