ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲನ್ನು ಯಶಸ್ವಿಯಾಗಿ ತೆಗೆದಿದೆ. 60 ವರ್ಷ ವಯಸ್ಸಿನ ಮಹಿಳೆ ಕಳೆದ ಆರು ವರ್ಷಗಳಿಂದ ಉರಿ ಮೂತ್ರದ ಸಮಸ್ಯೆಗಾಗಿ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಈ ಪ್ರತಿ ಭೇಟಿಯಲ್ಲಿಯೂ ಅವರಿಗೆ ಮೂತ್ರನಾಳದ ಸೋಂಕಿಗೆ ಪ್ರಾಯೋಗಿಕವಾಗಿ ಚಿಕಿತ್ಸೆ ನೀಡಲಾಗಿತ್ತು. ಮಹಿಳೆಯು ಇತ್ತೀಚೆಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಸಂಪೂರ್ಣ ಮೂತ್ರಕೋಶವನ್ನು ಆಕ್ರಮಿಸಿಕೊಂಡಿರುವ ಕಲ್ಲು ಇರುವುದು ಬಹಿರಂಗವಾಯಿತು.
ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಉಪ ವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ 11.5 x 7.5 ಸೆಂ.ಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಡಾ.ಅಂಶುಮನ್, ಡಾ.ಕಾಶಿ ವಿಶ್ವನಾಥ್, ಡಾ.ನಿಶಾ, ಡಾ ವಿವೇಕ್ ಪೈ ಮತ್ತು ಡಾ. ಕೃಷ್ಣ ಅವರ ತಂಡವು ತೆರೆದ ಸಿಸ್ಟೊಲಿಥೊಟಮಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ಎರಡನೇ ದಿನ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಅಲ್ಟ್ರಾಸೋನೋಗ್ರಫಿ ಅಥವಾ ಎಕ್ಸ್-ರೇನಂತಹ ಆರೋಗ್ಯ ಸೌಲಭ್ಯಗಳನ್ನು ಹೊಂದಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ರೋಗನಿರ್ಣಯವನ್ನು ಮಾಡುವುದು ಸವಾಲಿನ ಸಂಗತಿಯಾಗಿದೆ.
ಆರೋಗ್ಯವಂತ ವಯಸ್ಕ ಮಹಿಳೆಯಲ್ಲಿ 672 ಗ್ರಾಂ ತೂಕದ ದೈತ್ಯ ಮೂತ್ರಕೋಶದ ಕಲ್ಲು ಪತ್ತೆಯಾಗಿರುವುದು ವಿಶ್ವದಲ್ಲಿ ವರದಿಯಾಗಿರುವ ಮಹಿಳಾ ರೋಗಿಯಲ್ಲಿನ ಅತಿ ದೊಡ್ಡ ಪ್ರಮಾಣದ್ದಾಗಿದೆ ಎಂದು ಕೆ.ಎಂ.ಸಿ ವೈದ್ಯರು ತಿಳಿಸಿದ್ದಾರೆ. ಮುಂಬೈನ ಕೆಇಎಂ ಆಸ್ಪತ್ರೆಯಿಂದ 528 ಗ್ರಾಂ ತೂಕದ ಕಲ್ಲು ಇದುವರೆಗೆ ಪತ್ತೆಯಾದ ಅತಿ ದೊಡ್ಡ ಕಲ್ಲು.
ಇದುವರೆಗೆ ಪತ್ತೆಯಾದ ಮೂತ್ರಕೋಶದ ಕಲ್ಲಿನಲ್ಲಿ ಇದೇ ಅತಿ ದೊಡ್ಡ ಮಟ್ಟದ ಕಲ್ಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅಪರೂಪದ ಕ್ಲಿಷ್ಟಕರ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ ತಂಡವನ್ನು ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ಅಭಿನಂದಿಸಿದ್ದಾರೆ.