ತಿರುವನಂತಪುರ: ಕಾಂತಾರ ಚಿತ್ರದ ವರಾಹರೂಪಂ ಹಾಡಿನ ಕಾನೂನಾತ್ಮಕ ಸಂಘರ್ಷದಲ್ಲಿ ನಿರ್ಮಾಪಕರಾದ ಹೊಂಬಾಳೆ ಫಿಲಂಮ್ಸ್ ನ ಮೊದಲನೆ ತಡೆ ಪಾರಾಗಿದ್ದು, ಹಾಡಿನ ಬಳಕೆಗೆ ಅನುಮತಿ ದೊರೆತಿದೆ.
ವರಾಹರೂಪಂ ಹಾಡನ್ನು ತನ್ನ ನವರಸಂ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಕೇರಳದ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕೋರ್ಟಿನಲ್ಲಿ ದಾವೆ ಹೂಡಿದ್ದು ಇದನ್ನು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಈ ವಿಚಾರವಾಗಿ ಈ ಹಾಡಿನ ಬರಹಗಾರ ಶಶಿರಾಜ್ ಕಾವೂರು, “ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ಇದರಿಂದಾಗಿ ವರಾಹರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆ ತೆರವಾಗಿದೆ ನ್ಯಾಯ ಗೆದ್ದಿದೆ. ಜೈ ತುಳುನಾಡು” ಎಂದು ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪಾಲಕ್ಕಾಡ್ ನ್ಯಾಯಾಲಯದಲ್ಲಿ ಥೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿರುವುದರಿಂದ ವರಾಹರೂಪಂ ಹಾಡನ್ನು ಸಧ್ಯಕ್ಕಂತೂ ಬಳಸಲು ಸಾಧ್ಯವಿಲ್ಲ. ಏತನ್ಮಧ್ಯೆ, ಒಟಿಟಿಯಲ್ಲಿ ಚಲನಚಿತ್ರ ವೀಕ್ಷಿಸುತ್ತಿರುವವರು ವರಾಹರೂಪಂ ಇಲ್ಲದ ಕಾಂತಾರ ಚಿತ್ರವನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ, ಆದಷ್ಟು ಬೇಗನೆ ಹಾಡನ್ನು ಮೂಲರೂಪದಲ್ಲಿ ವಾಪಾಸು ತನ್ನಿ ಎಂದು ಚಿತ್ರ ನಿರ್ಮಾಪಕರಿಗೆ ದಂಬಾಲು ಬೀಳುತ್ತಿದ್ದಾರೆ.
ಹೈಕೋರ್ಟ್ ಅರ್ಜಿ ವಜಾ
ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಜಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡನ್ನು ಬಳಸುವುದನ್ನು ತಡೆಯುವ ಮಧ್ಯಂತರ ತಡೆಯಾಜ್ಞೆ ಆದೇಶದ ವಿರುದ್ಧ ಹೊಂಬಾಳೆ ಫಿಲಂಮ್ಸ್ (ಕಾಂತಾರ ಚಲನಚಿತ್ರದ ನಿರ್ಮಾಪಕ) ಸಲ್ಲಿಸಿದ ಅರ್ಜಿಗಳನ್ನು ಕೇರಳ ಹೈಕೋರ್ಟ್ ಬುಧವಾರ ವಜಾಗೊಳಿಸಿತ್ತು. ಮಧ್ಯಂತರ ಆದೇಶಗಳ ವಿರುದ್ಧ ಇತರ ಪರಿಹಾರಗಳು ಲಭ್ಯವಿರುವಾಗ ಹೈಕೋರ್ಟ್ನಲ್ಲಿರುವ ಪರಿಹಾರವನ್ನು ಅನ್ವಯಿಸಲಾಗುವುದಿಲ್ಲ ಎಂದು ಅದು ಹೇಳಿತ್ತು.
ಇದೀಗ ಕೋಜಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಥೈಕುಡಂ ಬ್ರಿಡ್ಜ್ ಅರ್ಜಿಯನ್ನು ತೆರವುಗೊಳಿಸಿದ್ದು, ಚೆಂಡು ಪಾಲಕ್ಕಾಡ್ ನ್ಯಾಯಾಲಯದ ಅಂಗಳದಲ್ಲಿದೆ. ಈ ಮಧ್ಯೆ, ಹಿಂದಿ ಡಬ್ಬಿಂಗ್ ಆವೃತ್ತಿಯ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ ಎಂದು ವರದಿಯಾಗಿದೆ.