ಪ್ರಕೃತಿಯಲ್ಲಿರುವ ಪಂಚಭೂತಗಳನ್ನು ದೇವತೆಗಳೆಂದು ಆರಾಧಿಸುವುದು ಸನಾತನ ಸಂಸ್ಕೃತಿ. ಸೃಷ್ಟಿಯಲ್ಲಿರುವ ಪ್ರತಿಯೊಂದು ವಸ್ತುವೂ ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ಎಂಬ ಪಂಚತತ್ವಗಳಿಂದಾಗಿದೆ. ಅಗ್ನಿಯಿಂದ ಸೃಷ್ಟಿಯ ಉತ್ಪತ್ತಿಯಾಗಿದೆ. ಅಗ್ನಿಯ ಪ್ರತ್ಯಕ್ಷ ರೂಪ ಸೂರ್ಯದೇವ. ಅದಿತಿಯ ಪುತ್ರನಾದ ಸೂರ್ಯನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಭೂಮಿಯ ಮೇಲಿನ ಜೀವನದ ಆಧಾರಸ್ತಂಭವಾಗಿರುವ ಆದಿತ್ಯನಿಗೆ ಸಮರ್ಪಿತ ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದ ಪ್ರಕಾರ ದುರ್ಬಲ ಸೂರ್ಯನನ್ನು ಹೊಂದಿರುವ ಅಥವಾ ಜೀವನದಲ್ಲಿ ಅನಿರ್ದಿಷ್ಟತೆಯನ್ನು ಅನುಭವಿಸುತ್ತಿರುವ ಜನರು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದಲ್ಲಿ ಯಶಸ್ಸು ನಿಶ್ಚಿತ.
ರಾಮನಿಗೆ ಮಹರ್ಷಿ ಅಗಸ್ತ್ಯರು ಬೋಧಿಸಿದ ಆದಿತ್ಯ ಹೃದಯ
ರಾಮ-ರಾವಣರ ಯುದ್ದದ ಅಂತಿಮ ಮತ್ತು ನಿರ್ಣಾಯಕ ಸಮಯದಲ್ಲಿ ಶ್ರೀರಾಮನು ರಾವಣನನ್ನು ಕೊಲ್ಲಲು ಹಲವು ಪ್ರಯತ್ನಗಳನ್ನು ಮಾಡಿದರೂ ಪ್ರತಿಬಾರಿಯೂ ಅಸಫಲನಾಗುತ್ತಾನೆ. ತನ್ನ ಶತ್ರುವನ್ನು ಕೊಲ್ಲಲಾಗದ ಈ ಅಸಹಾಯಕತೆಯಿಂದ ವಿಚಲಿತನಾದ ಮತ್ತು ದುಃಖಿತನಾದ ಶ್ರೀರಾಮನ ಮನಸ್ಸನ್ನು ಆಯಾಸ ಮತ್ತು ನಿರಾಶೆ ಆವರಿಸುತ್ತದೆ. ಶ್ರೀರಾಮನು ಖಿನ್ನನಾದ ಈ ಹೊತ್ತಿನಲ್ಲಿ ಮಹರ್ಷಿ ಅಗಸ್ತ್ಯರು ರಾಮನಿಗೆ ಕಾಣಿಸಿಕೊಂಡು ಆದಿತ್ಯ ಹೃದಯ ಸ್ತ್ರೋತ್ರವನ್ನು ಬೋಧಿಸುತ್ತಾರೆ. ಸೂರ್ಯವಂಶದ ಮಹಾಬಾಹುವಾದ ರಾಮ ಮತ್ತು ಜಗತ್ತಿಗೆ ಜೀವನವನ್ನು ನೀಡುವ ಸೂರ್ಯನ ಮಧ್ಯದ ಹೋಲಿಕೆಗಳನ್ನು ಸಮೀಕರಿಸುತ್ತ ಆದಿತ್ಯ ಹೃದಯ ಸ್ತೋತ್ರವನ್ನು ರಾಮನಿಗೆ ಕಲಿಸಿಕೊಡುತ್ತಾರೆ. ಈ ಆದಿತ್ಯ ಹೃದಯವನ್ನು ಪಠಿಸಿದ ಶ್ರೀರಾಮ ಶೋಕ ಮತ್ತು ನಿರಾಶೆಯಿಂದ ಹೊರಬಂದು ಪ್ರಫುಲ್ಲಿತನಾಗಿ ಹೊಸ ಚೈತನ್ಯದೊಂದಿಗೆ ಹೋರಾಡಿ ರಾವಣನನ್ನು ಕೊಲ್ಲುತ್ತಾನೆ.
ಆದಿತ್ಯವಾರದಂದು ಆದಿತ್ಯ ಸ್ತ್ರೋತ್ರ ಪಠಣ ಮಾಡಿದಲ್ಲಿ ಶ್ರೇಯಸ್ಸು
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಾರದ ಪ್ರತಿ ದಿನವೂ ಒಬ್ಬ ದೇವತೆಗೆ ಅರ್ಪಿತವಾಗಿದೆ. ಸೋಮವಾರ ಶಿವನಿಗೆ, ಮಂಗಳವಾರ ಆಂಜನೇಯನಿಗೆ ಅಥವಾ ದೇವಿಗೆ ಇತ್ಯಾದಿ. ಈ ರೀತಿ ಆದಿತ್ಯವಾರವು ಸೂರ್ಯನಿಗೆ ಮೀಸಲಾಗಿದೆ. ನಿತ್ಯ ಒಂದು ಬಾರಿ ಆದಿತ್ಯ ಹೃದಯ ಪಠಿಸಿದರೆ ಒಳಿತು. ಆದಾಗ್ಯೂ, ಆದಿತ್ಯವಾರದಂದು ಈ ಸ್ತೋತ್ರವನ್ನು ಪಠಿಸಿದಲ್ಲಿ ಪರಿಣಾಮ ಹೆಚ್ಚು ಎನ್ನುವುದು ಜ್ಯೋತಿಷ್ಯಶಾಸ್ತ್ರಕಾರರ ಅಂಬೋಣ.
ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು
# ಸೂರ್ಯನ ಆಶೀರ್ವಾದದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗಲು ನಿಮಗೆ ಸಹಾಯ ಮಾಡುತ್ತದೆ.
# ಇದು ನಿಮ್ಮಲ್ಲಿರುವ ಆತಂಕಗಳು ಮತ್ತು ಅಶಾಂತಿಯನ್ನು ದೂರಮಾಡಲು ಸಹಕಾರಿ.
# ನಿಮ್ಮನ್ನು ಹೆಚ್ಚು ಧೈರ್ಯಶಾಲಿಯನ್ನಾಗಿಸುತ್ತದೆ.
# ಸ್ತೋತ್ರ ಪಠಣೆ ಕಷ್ಟಗಳನ್ನು ಪರಿಹರಿಸುತ್ತದೆ ಮತ್ತು ದುಃಖದಿಂದ ನಿಮ್ಮನ್ನು ಪಾರು ಮಾಡುತ್ತದೆ.
# ಖಿನ್ನತೆಯನ್ನು ದೂರ ಮಾಡಿ ದೃಢನಿಶ್ಚಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
# ಆದಿತ್ಯ ಹೃದಯ ಸ್ತೋತ್ರವು ಜೀವನದಲ್ಲಿ ಸಮೃದ್ಧಿ ಮತ್ತು ಸ್ಪಷ್ಟತೆಯನ್ನು ತರುತ್ತದೆ.
# ಸುತ್ತಮುತ್ತಲು ಇರುಬಹುದಾದ ಋಣಾತ್ಮಕ ಶಕ್ತಿಗಳನ್ನು ಉಚ್ಛಾಟಿಸುತ್ತದೆ.
# ಈ ಸ್ತೋತ್ರಕ್ಕೆ ರೋಗ ಮುಕ್ತವಾಗಿಸುವ ಮತ್ತು ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ.
# ಬಾಹ್ಯ ಮತ್ತು ಅಂತರಯುದ್ದಗಳನ್ನು ಗೆಲ್ಲಲು ಚೈತನ್ಯ ನೀಡುತ್ತದೆ.
ಭಾರತೀಯ ಪರಂಪರೆಯ ವೈದಿಕ ಸಂಸ್ಕೃತಿಯಲ್ಲಿ ಪ್ರತಿಯೊಂದು ಮಂತ್ರ ಮತ್ತು ಶ್ಲೋಕಕ್ಕೂ ಅದರದ್ದೇ ಆದ ನಿಶ್ಚಿತ ಶಕ್ತಿ ಮತ್ತು ಫಲಶೃತಿಗಳಿರುತ್ತವೆ. ಪ್ರಭು ಶ್ರೀರಾಮನಿಗೆ ದೃಢತೆ ಮತ್ತು ಆತ್ಮವಿಶ್ವಾಸವನ್ನು ತಂದುಕೊಟ್ಟ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣಬಹುದು. ವಿಶೇಷವಾಗಿ ಅನಿಶ್ಚಿತತೆ ಮತ್ತು ಋಣಾತ್ಮಕ ವಿಚಾರಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಒತ್ತಡ ಮತ್ತು ಖಿನ್ನತೆಯು ಎಲ್ಲರನ್ನೂ ಕಾಡುತ್ತಿದ್ದು, ಅಗಸ್ತ್ಯರು ತಮ್ಮ ತಪಸ್ಸಿನಿಂದ ಸಾಕ್ಷಾತ್ಕರಿಸಿದ ಈ ಸ್ತೋತ್ರವು ಸನ್ಮಂಗಳವನ್ನು ನೀಡುವುದರಲ್ಲಿ ಸಂಶಯವಿಲ್ಲ.