ಕುಕ್ಕರ್ ಬಾಂಬ್ ಸ್ಪೋಟದ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹರಿಸುತ್ತೇವೆ: ಸಂಸದ ತೇಜಸ್ವಿ ಸೂರ್ಯ

ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶ. ಆರ್ಥಿಕ ಶಕ್ತಿ ಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು ಮತ್ತು ಸ್ಪೋಟದ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದರು.

ಈ ಹಿಂದೆ ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರ ಬೇರು ಸಮೇತ ಕಿತ್ತು ಹಾಕುತ್ತೇವೆ.

ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಉಗ್ರ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಿದೆ. ಕರ್ನಾಟಕ ಕರಾವಳಿ ವಿಚ್ಛಿದ್ರ ಶಕ್ತಿಗಳ ಕೇಂದ್ರವಾಗುತ್ತಿದ್ದು,
ಕರಾವಳಿಯಲ್ಲಿ ಎನ್ಐಎ ಕಚೇರಿ ಸ್ಥಾಪನೆಯಾಗಬೇಕಿದೆ. ಇದರ ಕುರಿತು ಈ ಹಿಂದೆಯೇ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಈ ಬಗ್ಗೆ ಮತ್ತೆ ಕೇಂದ್ರ ಸರಕಾರ ಜೊತೆ ಮಾತನಾಡುತ್ತೇನೆ ಎಂದರು.

ಪೊಲೀಸ್ ಇಲಾಖೆ ಮತ್ತು ತನಿಖಾ ದಳ ಜೊತೆಯಾಗಿ ಕೆಲಸ ಮಾಡಿದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಬಹುದು. ರಾಜ್ಯದ ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಿದ್ದು, ನಾವು ಓಟ್ ಬ್ಯಾಂಕ್ ರಾಜಕೀಯದ ಮುಲಾಜಿಗೆ ಬೀಳುವುದಿಲ್ಲ. ರಾಷ್ಟ್ರ ಮತ್ತು ರಾಜ್ಯದ ಸುರಕ್ಷತೆ ನಮ್ಮಆದ್ಯತೆ. ದೇಶದ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದರು.