ಉಡುಪಿ: ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿವಾಸಿ, ಬಂಗೇರ ಫ್ಲೋರ್ ಮಿಲ್ಸ್ ನ ಮಾಲಕ ಆರೋಪಿ ಆಕಾಶ್ ಬಂಗೇರರಿಗೆ ಒಂದು ವರ್ಷ ಶಿಕ್ಷೆ ಹಾಗೂ 6,35,000ರೂ ಪರಿಹಾರ ಹಣವನ್ನು ಉಡುಪಿ ಫಿರ್ಯಾದಿದಾರರಾದ ಕೆ.ಎನ್.ಎಸ್.ಕಾಮತ್ ಎಂಡ್ ಸನ್ಸ್ ನ ಮಾಲಕರಾದ ಕಟಪಾಡಿಯ ಹಿರಿಯ ಪ್ರಜೆ ವಿಠಲ್ ಎನ್.ಕಾಮತ್ ರಿಗೆ ನೀಡುವಂತೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಜ.ಶ್ಯಾಮ್ ಪ್ರಕಾಶ್ ರವರು ಆದೇಶಿಸಿದ್ದಾರೆ.
ಚೆಕ್ ಅಮಾನ್ಯ ಪ್ರಕರಣದಲ್ಲಿ ನ.21 ಸೋಮವಾರದಂದು ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಪ್ರಕಟಿಸಿ, ಫಿರ್ಯಾದಿದಾರರಿಗೆ 6,35,000 ರೂ ಪರಿಹಾರ ಪಾವತಿಸಲು ಆದೇಶಿಸಿ ತೀರ್ಪು ನೀಡಿದೆ.
ಫಿರ್ಯಾದಿದಾರ ಕಟಪಾಡಿಯ ವಿಠಲ್ ಎನ್.ಕಾಮತ್ ಪರವಾಗಿ ಉಡುಪಿ ನ್ಯಾಯವಾದಿ ಶಿರಿಯಾರ ಪ್ರಭಾಕರ ಕಲ್ಮರ್ಗಿ ನಾಯಕ್ ವಕಾಲತ್ತು ಸಲ್ಲಿಸಿ ವಾದಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಆರೋಪಿ ದಿನಾಂಕ 14-5-2019 ರಂದು 4,73,185 ರೂ ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಸಾಲವಾಗಿ ವಿಠಲ್ ಕಾಮತ್ ರವರ ಅಂಗಡಿಯಿಂದ ಖರೀದಿಸಿದ್ದು, ಸದ್ರಿ ಸಾಲದ ಬಗ್ಗೆ ಆರೋಪಿಯು ಫಿರ್ಯಾದಿದಾರರಿಗೆ ಚೆಕ್ ನೀಡಿದ್ದು, ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಫಿರ್ಯಾದಿದಾರರು ವಕೀಲರ ಮೂಲಕ ಆರೋಪಿಗೆ ಖುದ್ದಾಗಿ ಕಾನೂನುಬದ್ದ ನೋಟೀಸ್ ಜಾರಿಗೊಳಿಸಿದ್ದು, ಸಾಲದ ಹಣ ಪಾವತಿಸದೆ ಇದ್ದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ನ್ಯಾಯಾಲಯವು ವಿಚಾರಣೆ ನಡೆಸಿ ಫಿರ್ಯಾದಿದಾರರ ಪರವಾಗಿ 6,35,000 ರೂ ಪಾವತಿಸಲು ಆದೇಶ ನೀಡಿದ್ದು, ಆರೋಪಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.