ಇಂಡೋನೇಷ್ಯಾದ ಜಾವದಲ್ಲಿ 5.6 ತೀವ್ರತೆಯ ಭೂಕಂಪ: ಕನಿಷ್ಟ 20ಸಾವು; ಹಲವರಿಗೆ ಗಾಯ

ಜಕಾರ್ತಾ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಕನಿಷ್ಟ ಇಪ್ಪತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕಂಪದ ಕೇಂದ್ರಬಿಂದುವಾಗಿರುವ ಪಶ್ಚಿಮ ಜಾವಾದ ಪಟ್ಟಣದ ಸಿಯಾಂಜೂರ್‌ನ ಸರ್ಕಾರಿ ಅಧಿಕಾರಿ ಹರ್ಮನ್ ಸುಹೆರ್ಮನ್ ಕನಿಶ್ಟ 20 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ವಾಹಿನಿ ಮೆಟ್ರೋ ಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ಸೋಮವಾರದ ಭೂಕಂಪವು ರಾಜಧಾನಿ ಜಕಾರ್ತಾದಿಂದ ಆಗ್ನೇಯಕ್ಕೆ 75 ಕಿಮೀ ದೂರದಲ್ಲಿರುವ ಸಿಯಾಂಜೂರ್‌ನಲ್ಲಿ ಮತ್ತು 10 ಕಿಮೀ (6.2 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ತಿಳಿಸಿದ್ದು, ಸುನಾಮಿ ಸಂಭವಿಸುವ ಸಾಧ್ಯತೆಯಿಲ್ಲ ಎಂದು ಹೇಳಿದೆ.

ಸಂಪೂರ್ಣ ಪ್ರಮಾಣದ ಹಾನಿ ಮತ್ತು ಸಾವು ನೋವಿನ ಪ್ರಮಾಣದ ಬಗ್ಗೆ ನಿಖರ ಮಾಹಿತಿಗಳಿಲ್ಲದಿದ್ದರೂ ಹಲವಾರು ಮನೆಗಳು ಸೇರಿದಂತೆ ಶಾಲೆಗಳು ಧರಾಶಾಯಿಯಾಗಿವೆ. ಸತ್ತವರ ಮತ್ತು ಗಾಯಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ನಂತರದ ಎರಡು ಗಂಟೆಗಳಲ್ಲಿ 25 ಭೂಕಂಪಗಳು ದಾಖಲಾಗಿವೆ ಎಂದು ಬಿಎಂಕೆಜಿ ತಿಳಿಸಿದೆ. ರಾಜಧಾನಿ ಜಕಾರ್ತಾದಲ್ಲಿ ಕಟ್ಟಡಾಗಳಿಂದ ಜನರನ್ನು ಹೊರಕಳುಹಿಸಲಾಗಿದೆ.

ಇಂಡೋನೇಷ್ಯಾ “ಪೆಸಿಫಿಕ್ ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುತ್ತದೆ. ಇದು ಹೆಚ್ಚು ಭೂಕಂಪನ ಸಕ್ರಿಯ ವಲಯವಾಗಿದ್ದು,ಇಲ್ಲಿ ಭೂಮಿಯ ಹೊರಪದರದ ವಿವಿಧ ತಟ್ಟೆಗಳ ತಿಕ್ಕಾಟದಿಂದಾಗಿ ಹೆಚ್ಚಿನ ಸಂಖ್ಯೆಯ ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಸೃಷ್ಟಿಯಾಗುತ್ತವೆ.