ಮಂಗಳೂರು: ನ. 26ರಂದು ಪುರಭವನದಲ್ಲಿ ಉತ್ತರ್-ದಕ್ಷಿಣ್ ಸಂಗೀತ ಕಾರ್ಯಕ್ರಮ

ಮಂಗಳೂರು: ದೇಶದ ನಾನಾ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದ ಸರಣಿ ಸಂಗೀತಕಾರ್ಯಕ್ರಮ `ಉತ್ತರ್-ದಕ್ಷಿಣ್’ ನ. 26 ಶನಿವಾರದಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5.30 ರಿಂದ ನಡೆಯಲಿದೆ.

ನಗರದ ಪ್ರತಿಷ್ಠಿತ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ವಿವಿದ್‌ ಆರ್ಟ್ಸ್ ಆ್ಯಂಡ್‌ ಎಂಟರ್‌ಟೈನ್‌ಮೆಂಟ್ ಹಾಗೂ ದಿ ಪಯೋನೀರ್‌ ಆರ್ಟ್ಸ್ ಎಜ್ಯುಕೇಷನ್ ಸೊಸೈಟಿಯು ಪ್ರಸ್ತುತ ಪಡಿಸುತ್ತಿದ್ದು, ದೇಶದ 11 ವೇದಿಕೆಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ ಈ ಸರಣಿಯ 12ನೇ ಕಾರ್ಯಕ್ರಮವು ನ. 26ರಂದು ಮಂಗಳೂರಿನಲ್ಲಿ ನಡೆಯಲಿದೆ.
ಪ್ರಖ್ಯಾತ ಗಾಯಕಿ ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಅವರ ಹಿಂದೂಸ್ತಾನಿ ಗಾಯನ ಹಾಗೂ ಕರ್ಣಾಟಕಿ ಸಂಗೀತದ ವಯೋಲಿನ್ ದಿಗ್ಗಜರಾದ ವಿದ್ವಾನ್‌ ಗಣೇಶ್ ಮತ್ತು ವಿದ್ವಾನ್‌ ಕುಮರೇಶ್‌ ಅವರ ಜುಗಲ್ ಬಂದಿ ನಡೆಯಲಿದೆ.

ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ಹಾರ್ಮೊನಿಯಂನಲ್ಲಿ ಪಂಡಿತ್ ವ್ಯಾಸಮೂರ್ತಿಕಟ್ಟಿ ಹಾಗೂ ತಬ್ಲಾದಲ್ಲಿ ಪಂಡಿತ್‌ ರವೀಂದ್ರ ಯಾವಗಲ್‌ ಸಹಕರಿಸಲಿದ್ದಾರೆ. ವಿದ್ವಾನ್‌ ಗಣೇಶ್ ಹಾಗೂ ವಿದ್ವಾನ್‌ ಕುಮರೇಶ್‌ಅವರ ವಯೋಲಿನ್ ಜುಗಲ್ ಬಂದಿಗೆ ಮೃದಂಗದಲ್ಲಿ ವಿದ್ವಾನ್ ಬಿ. ಹರಿಕುಮಾರ್ ಹಾಗೂ ಘಟಂನಲ್ಲಿ ವಿದ್ವಾನ್‌ ತ್ರಿಚಿಕೃಷ್ಣಸ್ವಾಮಿ ಅವರು ಸಹಕರಿಸಲಿದ್ದಾರೆ.

ಉತ್ಕೃಷ್ಟ ಮಟ್ಟದ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಉತ್ತರಾದಿ ಹಾಗೂ ದಕ್ಷಿಣಾದಿ ವಿಭಾಗದ ಸಂಗೀತ ಪ್ರಿಯರಿಗೆ ಇದೊಂದು ರಸದೌತಣವಾಗಲಿದೆ.

ಮುಂಬಯಿ ಮೂಲದ ವಿದುಷಿ ಅಶ್ವಿನಿ ಭಿಡೆದೇಶಪಾಂಡೆ, ಮೈಕ್ರೋ ಬಯೋಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬಾಬಾ ಅಟೋಮಿಕ್‌ರಿಸರ್ಚ್ ಸೆಂಟರ್‌ನಲ್ಲಿ ಬಯೋ ಕೆಮೆಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಸಂಗೀತ ‘ವಿಶಾರದ’ವನ್ನು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ್‌ನಿಂದ ಪಡೆದಿದ್ದಾರೆ. ದೇಶ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಛೇರಿ ನೀಡಿರುವ ಇವರು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ವಿದ್ವಾನ್‌ ಗಣೇಶ್ ಮತ್ತು ವಿದ್ವಾನ್‌ ಕುಮರೇಶ್‌ ಕರ್ಣಾಟಕೀ ಸಂಗೀತದ ಶ್ರೇಷ್ಠ ಕಲಾವಿದರು. ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ ಕಲಾವಿದ ದ್ವಯರು ಬಾಲ್ಯದಿಂದಲೇ ಸಂಗೀತಾಭ್ಯಾಸ ಮಾಡಿ ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಈ ಸಹೋದರರು ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಅಕಾಡೆಮಿ ಆಫ್ ಮ್ಯೂಸಿಕ್ ಚೌಡಯ್ಯ ಪುರಸ್ಕಾರ, ಶ್ರೀ ಕಂಚಿಕಾಮಕೋಟಿ ಪೀಠದ ಆಸ್ಥಾನ ವಿದ್ವಾಂಸ, ಕಲೈಮಣಿ, ಸುನಾದ ಸಂಗೀತ ಸಾರಂಗ್ಯ ಮುಂತಾದ ಪುರಸ್ಕಾರಗಳನ್ನು ಪಡೆದಿದ್ದಾರೆ.