ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್: 40ಕ್ಕೂ ಹೆಚ್ಚು ವಾಹನಗಳು ಜಖಂ, 6 ಮಂದಿಗೆ ಗಾಯ

ಪುಣೆ: ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆಯಲ್ಲಿ ಭಾನುವಾರದಂದು ರಾತ್ರಿ ಟ್ರಕ್ ಒಂದು ನಿಯಂತ್ರಣ ತಪ್ಪಿ ಸೇತುವೆಯ ಮೇಲೆ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 6 ಜನರು ಗಾಯಗೊಂಡಿದ್ದಾರೆ, ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವರದಿಗಳ ಪ್ರಕಾರ ಪುಣೆಗೆ ತೆರಳುತ್ತಿದ್ದ ಟ್ಯಾಂಕರ್‌ನ ಬ್ರೇಕ್ ವಿಫಲವಾಗಿ ನವಲೆ ಸೇತುವೆಯಲ್ಲಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.

Image: ANI

ಘಟನೆಯಲ್ಲಿ ಕನಿಷ್ಠ 48 ವಾಹನಗಳು ಹಾನಿಗೊಳಗಾಗಿವೆ ಎಂದು ಪುಣೆ ಮೆಟ್ರೋಪಾಲಿಟಿಕಲ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ ಯ ಅಗ್ನಿಶಾಮಕ ವಿಭಾಗವು ಹೇಳಿಕೊಂಡಿದ್ದು, ಕನಿಷ್ಟ 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.

ಇಲ್ಲಿನ ರಸ್ತೆಯ ಇಳಿಜಾರು ಹೆಚ್ಚಿರುವುದರಿಂದ ಹಾಗೂ ಅತಿವೇಗದಿಂದ ಬರುವ ವಾಹನಗಳಿಂದಾಗಿ ಹಲವಾರು ಬಾರಿ ನವಲೆ ಸೇತುವೆ ಪ್ರದೇಶದಲ್ಲಿ ಅಪಘಾತಗಳು ಸಂಭವಿಸಿವೆ ಎನ್ನಲಾಗಿದೆ. ಹಾನಿಗೊಳಗಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.