ವಾರಣಾಸಿ: ಇಲ್ಲಿ ಒಂದು ತಿಂಗಳ ಕಾಲ ನಡೆಯುವ ಕಾಶಿ-ತಮಿಳು ಸಂಗಮವನ್ನು ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಶಿ-ತಮಿಳು ಸಂಗಮವು ಗಂಗಾ-ಯಮುನಾ ಸಂಗಮದಷ್ಟು ಪವಿತ್ರವಾಗಿದೆ ಎಂದು ಹೇಳಿದರು. ತಮಿಳಿನ ರೂಪದಲ್ಲಿ ಪ್ರಪಂಚದ ಅತ್ಯಂತ ಹಳೆಯ ಭಾಷೆ ನಮ್ಮಲ್ಲಿದೆ ಎಂಬುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಈ ಪರಂಪರೆಯನ್ನು ಉಳಿಸುವುದರ ಜೊತೆಗೆ ಶ್ರೀಮಂತಗೊಳಿಸಬೇಕು. ಕಾಶಿ-ತಮಿಳು ಸಂಗಮ ಕಾರ್ಯಕ್ರಮವು ಶತಮಾನಗಳ-ಹಳೆಯ ಜ್ಞಾನದ ಬಂಧ ಮತ್ತು ಉತ್ತರ ಮತ್ತು ದಕ್ಷಿಣದ ನಡುವಿನ ಪ್ರಾಚೀನ ನಾಗರಿಕತೆಯ ಸಂಬಂಧವನ್ನು ಮರುಶೋಧಿಸುವ ಗುರಿಯನ್ನು ಹೊಂದಿದೆ.
ಭಾಷೆಯ ಆಧಾರದ ಭೇದವನ್ನು ತೊಡೆದು ಭಾವನಾತ್ಮಕವಾಗಿ ಒಂದಾಗಬೇಕು. ತಮಿಳು ಭಾಷೆಯನ್ನು ಮರೆತರೆ ಅಥವಾ ಅದನ್ನು ಬಂದನದಲ್ಲಿಟ್ಟರೆ, ಈ ಎರಡೂ ಪರಿಸ್ಥಿಯಲ್ಲೂ ದೇಶಕ್ಕೇ ನಷ್ಟವಾಗಲಿದೆ. ಕಾಶಿ ಮತ್ತು ತಮಿಳುನಾಡು ಸಂಸ್ಕೃತಿ ಮತ್ತು ನಾಗರಿಕತೆಯ ಕಾಲಾತೀತ ಕೇಂದ್ರಗಳಾಗಿವೆ. ಈ ಎರಡೂ ಪ್ರದೇಶಗಳು ವಿಶ್ವದ ಅತ್ಯಂತ ಹಳೆಯ ಭಾಷೆಗಳಾದ ಸಂಸ್ಕೃತ ಮತ್ತು ತಮಿಳಿನ ಕೇಂದ್ರಗಳಾಗಿವೆ ಎಂದು ಮೋದಿ ಹೇಳಿದರು.
ಕಾಶಿಯಲ್ಲಿ ಬಾಬಾ ವಿಶ್ವನಾಥನಿದ್ದರೆ, ತಮಿಳುನಾಡಿನಲ್ಲಿ ರಾಮೇಶ್ವರನ ಆಶೀರ್ವಾದವಿದೆ. ಕಾಶಿ ಮತ್ತು ತಮಿಳುನಾಡು ಇವೆರಡೂ ‘ಶಿವಮಯ’ ಮತ್ತು ‘ಶಕ್ತಿಮಯ’ವಾಗಿದೆ. ನಮ್ಮಲ್ಲಿ ಬೆಳಗೆದ್ದು ಸೌರಾಷ್ಟ್ರದ ಸೋಮನಾಥನಿಂದ ಹಿಡಿದು, ಸೇತುಬಂಧದ ರಾಮೇಶ್ವರನವರೆಗೆ 12 ಜ್ಯೋತಿರ್ಲಿಂಗಗಳನ್ನು ಸ್ಮರಣೆ ಮಾಡುವ ಪರಂಪರೆ ಇದೆ. ಸ್ವಾತಂತ್ರ್ಯಾನಂತರ ದೇಶವನ್ನು ಎಕತೆಯಲ್ಲಿ ಬೆಸೆಯುವ ಅವಕಾಶಗಳಿದ್ದರೂ ಅದನ್ನು ಮಾಡಲಾಗಿಲ್ಲ. ಕಾಶಿ-ಸಂಗಮ ಕಾರ್ಯಕ್ರಮದ ಮೂಲಕ ದೇಶವನ್ನು ಏಕಸೂತ್ರದಲ್ಲಿ ಬೆಸುಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾಶಿ ತಮಿಳು ಸಂಗಮಂ ಕಾರ್ಯಕ್ರಮವನ್ನು ಉತ್ತರ ಪ್ರದೇಶ ಸರ್ಕಾರದೊಂದಿಗೆ ಭಾರತ ಸರ್ಕಾರದ ಸಹಕಾರದೊಂದಿಗೆ ದೊಡ್ಡ ಪ್ರಮಾಣದಲ್ಲಿ ಯೋಜಿಸಲಾಗಿದೆ. ಕಾರ್ಯಕ್ರಮವು ಉತ್ತರ ಮತ್ತು ದಕ್ಷಿಣಭಾರತವನ್ನು ಏಕಸೂತ್ರದಲ್ಲಿ ಬೆಸೆಯುವ ಪ್ರಯತ್ನವಾಗಿದೆ.