ಉಡುಪಿ: ಸರಕಾರವು ಸಾರ್ವಜನಿಕರ ಅಭಿವೃದ್ದಿಗಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಂಡು ಆ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಹಲವು ಯೋಜನೆಗಳ ಸಮಗ್ರ ಮಾಹಿತಿ ಪಡೆಯಲು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಶನಿವಾರದಂದು ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಗೀತಾ ಮಂದಿರದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಎಲ್ಲಾ ಸಮಸ್ಯೆಗಳನ್ನು ಅಲಿಸಿ, ಅವುಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮಸ್ಥರೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಲು ಅವಕಾಶವಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳು ಒಂದೇ ಕಡೆ ಸೇರಿರುವಾಗ ಇಲಾಖೆಗಳ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದರು.
ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಸುಮಾರು 43 ಕೋಟಿ ರೂ ಗಳಿಗೂ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ಮಾತನಾಡಿ, ಗ್ರಾ.ಪಂ ಕಟ್ಟಡ, ಎನ್ ಆರ್ ಎಲ್ ಎಮ್ ಸಂಜೀವಿನಿ ಶೆಡ್ಡು ನಿರ್ಮಾಣ, ನರ್ಸರಿ, ಆಟದ ಮೈದಾನ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು 5 ಎಕರೆ ಸರಕಾರಿ ಜಮೀನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿದ್ದಾರೆ. 1.25 ಕೋಟಿ ವೆಚ್ಚದ ಗ್ರಾ.ಪಂ ಕಟ್ಟಡ ನಿರ್ಮಾಣ ಯೋಜನೆ ಸಿದ್ದಪಡಿಸಿದ್ದು, ಮನೆ ನಿವೇಶನಕ್ಕೆ 3 ಎಕರೆ ಜಮೀನು ಮಂಜೂರಾತಿ ಹಂತದಲ್ಲಿದೆ. ಕೆ.ಕೆ ಹೆಬ್ಬಾರ ಪ್ರತಿಷ್ಠಾನಕ್ಕೆ ಅನುಮೋದನೆ ದೊರೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ಅರ್ಜಿ, ಅಹವಾಲು ಸ್ವೀಕರಿಸಿ, 10 ಕ್ಕೂ ಹೆಚ್ಚು ಅಹವಾಲುಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. 15 ಮಂದಿಗೆ ಮಾಸಾಶನ ಮಂಜೂರಾತಿ ಹಾಗೂ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯ ಕಿಟ್ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಭವನದ ಉದ್ಘಾಟನೆ, ತಿರ್ಲಪಲ್ಕೆ ಅಂಗನವಾಡಿ ಕೇಂದ್ರದ ಉದ್ಘಾಟನೆ, ಕಟ್ಟಿಂಗೇರಿ ಎಸ್ ಎಲಾರ್ ಎಮ್ ಘಕಕ್ಕೆ ಭೇಟಿ, ಪಾಂಬೂರು ಕೊರಗರ ಕಾಲನಿ ಭೇಟಿ, ಮಧ್ವಾಚಾರ್ಯ ಸಂಸ್ಥಾನ ಭೇಟಿ, ಭದ್ರಮ ರಸ್ತೆ ಸೇತುವೆ ಕಾಮಗಾರಿ ವೀಕ್ಷಣೆ ನಡೆಸಲಾಯಿತು.
ಸಹಾಯಕ ಕಮಿಷನರ್ ಕೆ ರಾಜು ಪ್ರಸ್ತಾವಿಕ ಮಾತುಗಳನ್ನಾಡಿದರು.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ ನಾಯಕ್, ಜಿ.ಪಂ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಹಮ್ಮದ್ ಐಸಾಕ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವೀಣಾ ವಿವೇಕಾನಂದ , ಕಾರ್ಮಿಕ ಅಧಿಕಾರಿ
ಕುಮಾರ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಶಂಕರ್ ಶೆಟ್ಟಿ, ವಿವಿಧ ಇಲಾಖಾಧಿಕಾರಿಗಳು, ಬೆಳ್ಳೆ ಗ್ರಾ.ಪಂ ಉಪಾಧ್ಯಕ್ಷೆ ಸಂದ್ಯಾ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾಪು ತಹಶಿಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸ್ವಾಗತಿಸಿದರು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಶಿಧರ್ ವಂದಿಸಿದರು.