ಬೆಳ್ತಂಗಡಿ: ಭಗವಾನ್ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ನ. 19-23ರವರೆಗೆ ಜರುಗಲಿದ್ದು, ನಾಡಿನ ಗಣ್ಯರು, ವಿದ್ವಾಂಸರು ಮತ್ತು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನ.22 ರಂದು ಜರುಗಲಿರುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಂತ್ರಾಲಯದ ಸಚಿವೆ ಸ್ಮೃತಿ ಇರಾನಿ ಇವರು ಉದ್ಘಾಟಿಸಲಿದ್ದಾರೆ. ಬಹುಶ್ರುತ ವಿದ್ವಾಂಸರಾದ ಎಂ.ಆರ್ ಸತ್ಯನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಸ್ರಿಕಟ್ಟೆ ಧರ್ಮಗುರುಗಳಾದ ಫಾ.ಮಾರ್ಸೆಲ್ ಪಿಂಟೋ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ಇ ವಾಲೀಕಾರ ಮತ್ತು ವಾಗ್ಮಿ ಮುನಿರಾಜ್ ರೆಂಜಾಳ ಉಪನ್ಯಾಸ ನೀಡಲಿದ್ದಾರೆ.
ನ.23 ರಂದು ನಡೆಯುವ ಸಾಹಿತ್ಯ ಸಮ್ಮೇಳವನ್ನು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಇವರು ಉದ್ಘಾಟಿಸಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸರಾದ ವಿದ್ವಾನ್ ಹೆಚ್.ವಿ ನಾಗರಾಜ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಸುಶಿಕ್ಷಣ ಸೇವಾಪರ ಸಂಸ್ಥೆಯ ಸ್ಥಾಪಕ ಸತ್ಯೇಶ್ ಎನ್ ಬೆಳ್ಳೂರ್, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ಲೇಕಖಿ ಡಾ.ಗೀತಾ ವಸಂತ ಉಪನ್ಯಾಸ ನೀಡಲಿದ್ದಾರೆ.
ಸಂಜೆ 8.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.