ನಿವೃತ್ತಿ ವೇತನ ಪಡೆಯಲು ಆನ್‌ಲೈನ್‌ ಅರ್ಜಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ

ಉಡುಪಿ: ಭವಿಷ್ಯ ನಿಧಿ (ಪಿ.ಎಫ್‌) ಹಣ ಮತ್ತು ನಿವೃತ್ತಿ ವೇತನ ಪಡೆಯಲು ಅರ್ಜಿಗಳನ್ನು
ಆನ್‌ಲೈನ್‌ ಮೂಲಕವೇ ಸಲ್ಲಿಸಲು ಕಡ್ಡಾಯಗೊಳಿಸಿರುವ ಕ್ರಮವನ್ನು ಖಂಡಿಸಿ ಹಾಗೂ 2015ರ ಮೊದಲಿನಂತೆ ಲಿಖಿತ ರೂಪದಲ್ಲಿ ಅರ್ಜಿ ಸ್ವೀಕರಿಸುವ ಕ್ರಮವನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಪಿಎಫ್‌ ಸಮಸ್ಯೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಗುರುವಾರ ಉಡುಪಿ ಪಿಎಫ್‌ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ಪಿಎಫ್‌ ದಾಖಲೆ ಆಧಾರ ಕಾರ್ಡಿಗೆ ಅನುಗುಣವಾಗಿ ತಿದ್ದುಪಡಿ ಮಾಡಲು ಅವಕಾಶ ನೀಡಬೇಕು.
ಕಾರ್ಮಿಕರಲ್ಲಿಲ್ಲದ ದಾಖಲೆಗಳನ್ನು ಕೇಳಿ ಕಾರ್ಮಿಕರನ್ನು ಸತಾಯಿಸುವುದು, ಮಾನಸಿಕವಾಗಿ
ಹಿಂಸಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.

ಪಿಎಫ್‌ ಸಮಸ್ಯೆ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ. ಭಟ್‌ ಮಾತನಾಡಿ,  ಗ್ರಾಮೀಣ ಭಾಗದಲ್ಲಿ ಬೀಡಿ ಕಟ್ಟಿ ಬದುಕು ಸಾಗಿಸುವ ಬೀಡಿ ಕಾರ್ಮಿಕರು ಪಿಎಫ್‌, ನಿವೃತ್ತಿ ವೇತನ ಪಡೆಯಲಾಗದ ದುಸ್ಥಿತಿಗೆ ಬಂದು ತಲುಪಿದ್ದಾರೆ ಎಂದರು.
ಪಿಎಫ್‌ ಸಮಸ್ಯೆ ಹೋರಾಟ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ಸರಪ್ಪಾಡಿ, ರಾಜ್ಯ ಬೀಡಿ
ಗುತ್ತಿಗೆದಾರರ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ, ಕರಾವಳಿ ಬೀಡಿ ಗುತ್ತಿಗೆದಾರರ
ಸಂಘದ ಅಧ್ಯಕ್ಷ ಕೃಷ್ಣ ರೈ, ಬೀಡಿ ಗುತ್ತಿಗೆದಾರ ಸುಂದರ್‌ ಕೋಟ್ಯಾನ್‌, ಈಶ್ವರಿ,
ಜಯರಾಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.