ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೆಂಗಣ್ಣಿನ ಸಮಸ್ಯೆ ಉತ್ತುಂಗದಲ್ಲಿದ್ದು, ಶೇ 40 ರಷ್ಟು ಶಾಲಾ ಮಕ್ಕಳಲ್ಲಿ ಕೆಂಗಣ್ಣಿನ ಸಮಸ್ಯೆಯ ಬಗ್ಗೆ ವರದಿಯಾಗಿದೆ. ಈ ಬಗ್ಗೆ ದ.ಕ ಜಿಲ್ಲೆಯ ಆಯೋಗ್ಯ ಇಲಾಖೆಯು ಜ್ಞಾಪನಾ ಪತ್ರವನ್ನು ಹೊರಡಿಸಿದ್ದು, ಕಾಯಿಲೆಗೆ ಒಳಗಾದ ಮಕ್ಕಳನ್ನು ಐದು ದಿನಗಳವರೆಗೆ ಶಾಲೆಗೆ ಕಳುಹಿಸದಂತೆ ಸೂಚನೆ ನೀಡಿದೆ. ಕೆಂಗಣ್ಣು ಒಬ್ಬರಿಂದ ಮತ್ತೊಬ್ಬರಿಗೆ ಶೀಘ್ರವಾಗಿ ಹರಡುವ ರೋಗವಾಗಿದ್ದು, ಸಾಮಾನ್ಯವಾಗಿ 3 ರಿಂದ 5 ದಿನಗಳಲ್ಲಿ ಗುಣಮುಖವಾಗುತ್ತದೆ.
ಮಕ್ಕಳ ಪೋಷಕರು ಕೆಂಗಣ್ಣಿನ ಸಮಸ್ಯೆ ಬಗ್ಗೆ ಶಾಲೆಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಹಾಗಾಗಿ ಶಿಕ್ಷಣ ಇಲಾಖೆಯ ಡಿಡಿಪಿಐ ಜೊತೆ ಮಾತನಾಡಿ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ಡಿಎಚ್ಒ ಡಾ.ಕಿಶೋರ್ ಕುಮಾರ್ ಎಂ ತಿಳಿಸಿದ್ದಾರೆ.
ಕೆಂಗಣ್ಣಿನ ಸಮಸ್ಯೆ ಇರುವ ಮಕ್ಕಳು ಗುಣಮುಖರಾಗುವವರೆಗೆ ಅವರಿಗೆ ರಜಾ ನೀಡಬಹುದು ಎಂದು ಶಾಲೆಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಳೆಗಾಲ ಮುಗಿದ ಬಳಿಕ ಕೆಂಗಣ್ಣು ಸಮಸ್ಯೆ ಕಾಣಿಸಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಕಣ್ಣಿನ ಡ್ರಾಪ್ಸ್ ಗಳನ್ನು ಬಳಸಬೇಕು. ಕೆಂಗಣ್ಣಿನ ಸಮಸ್ಯೆ ಇರುವವರು ತಂಪು ಕನ್ನಡಕಗಳನ್ನು ಧರಿಸಬೆಕು ಮತ್ತು ಮನೆಯಲ್ಲಿರುವ ಇತರರು ತಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಪದೇ ಪದೇ ಕಣ್ಣನ್ನು ಮುಟ್ಟುತ್ತಿರಬಾರದು. ರೋಗ ಉಲ್ಬಣವಾದಲ್ಲಿ ನೇತ್ರ ತಜ್ಞರನ್ನು ಕೂಡಲೇ ಸಂಪರ್ಕಿಸಬೇಕು ಎಂದು ಅವರು ಹೇಳಿದ್ದಾರೆ.












