ನವೆಂಬರ್‌ 21 ರಿಂದ ಭತ್ತ ಖರೀದಿ ನೋಂದಣಿ ಕೇಂದ್ರ ಆರಂಭ: 7 ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪನೆ

ಉಡುಪಿ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕುರಿತು ಮಂಗಳವಾರದಂದು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಲಾಯಿತು. ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸ್ಥಳೀಯವಾಗಿ ಬೆಳದಿರುವ ಭತ್ತವನ್ನು ಖರೀದಿಸಲು ನವೆಂಬರ್‌ 21 ರಿಂದ ನೋಂದಣಿ ಕೇಂದ್ರಗಳನ್ನು ತೆರೆದು, ರೈತರ ನೋಂದಣಿಯನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಕಜೆ,ಜಯ,ಜ್ಯೋತಿ,ಪಂಚಮುಖಿ,ಸಹ್ಯಾದ್ರಿ, ಉಷಾ,ಅಭಿಲಾಷ,ಎಂಓ4 ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದ್ದು,ಸಾಮಾನ್ಯ ಭತ್ತಕ್ಕೆ ರೂ.2540.00 ದರ ನಿಗದಿಪಡಿಸಲಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 10 ಕಡೆಗಳಲ್ಲಿ ಭತ್ತ ನೋಂದಣಿ ಕೇಂದ್ರಗಳನ್ನು ಹಾಗೂ 7 ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಬೇಡಿಕೆ ಇದ್ದಲ್ಲಿ ಅಗ್ಯತ್ಯಕ್ಕೆ ತಕ್ಕಂತೆ ಹೆಚ್ಚಿನ ನೋಂದಣಿ ಮತ್ತು ಖರೀದಿ ಕೇಂದ್ರ ತೆರೆಯಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.

ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್ ಗಳನ್ನು ನಿಯೋಜಿಸುವಂತೆ ಹಾಗೂ ಖರೀದಿಸಿದ ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸುವಂತೆ ತಿಳಿಸಿದ ಅವರು, ಈಗಾಗಲೇ ಪ್ರೂಟ್ಸ್ ತತ್ರಾಂಶದಲ್ಲಿ ನೋಂದಣಿಯಾದ ರೈತರು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದ್ದು, ಇದುವರೆಗೆ ಈ ತಂತ್ರಾಂಶದಲ್ಲಿ ನೋಂದಣಿಯಾಗದ ರೈತರು ನೋಂದಣಿ ಮಾಡಿ ಮಾರಾಟ ಮಾಡಬಹುದಾಗಿದೆ. ಭತ್ತ ಮಾರಾಟದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವುದರಿಂದ, ಮಾರಾಟ ಸಮಯದಲ್ಲಿ ರೈತರು ಆಧಾರ್ ಸಂಖ್ಯೆಗೆ ಜೋಡಿಸಲಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವಂತೆ ತಿಳಿಸಿದರು.

ಸಭೆಯಲ್ಲಿ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ತರಬೇತಿ ನಿರತ ಜಿಲ್ಲಾಧಿಕಾರಿ ಯತೀಶ್, ಆಹಾರ ಇಲಾಖೆ ಉಪ ನಿರ್ದೇಶಕ ಮೊಹಮದ್ ಇಸಾಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳು, ಎಪಿಎಂಸಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.