ಬೆಂಗಳೂರು: ಮಂಗಳವಾರದಿಂದ ಹಾಲು ಮತ್ತು ಮೊಸರು ದರವನ್ನು ಹೆಚ್ಚಿಸುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಿರ್ಧಾರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಾತ್ಕಾಲಿಕ ತಡೆ ಹಾಕಿದ್ದಾರೆ. ಮುಖ್ಯಮಂತ್ರಿ ನಿರ್ದೇಶನದ ನಂತರ, ಹಾಲು ಮತ್ತು ಮೊಸರಿನ ಬೆಲೆಗಳನ್ನು ಪರಿಷ್ಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನವೆಂಬರ್ 20 ರವರೆಗೆ ಕಾಯಲು ಕೆಎಂಎಫ್ ನಿರ್ಧರಿಸಿದೆ.
ಸೋಮವಾರ ಮಧ್ಯರಾತ್ರಿಯೊಳಗೆ ಬೆಲೆ ಏರಿಕೆ ಮಾಡಲು ಕೆಎಂಎಫ್ ನಿರ್ಧರಿಸಿದ ಸುದ್ದಿ ತಿಳಿದ ಮುಖ್ಯಮಂತ್ರಿ ಬೊಮ್ಮಾಯಿ, ನವೆಂಬರ್ 20ರ ವರೆಗೆ ಬೆಲೆ ಏರಿಕೆ ಮಾಡದಂತೆ ಘಟಕವನ್ನು ಕೇಳಿಕೊಂಡಿದ್ದಾರೆ. ಕೆಎಂಎಫ್ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ನಿರ್ಧರಿಸುವುದಾಗಿ ಹೇಳಿರುವ ಅವರು, ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಒಂದು ಲೀಟರ್ ಟೋನ್ಡ್ ಹಾಲಿಗೆ 40 ರೂ(ಹಿಂದೆ 30ರೂ) ಹೋಮೋಜಿನೈಸ್ಡ್ ಟೋನ್ಡ್ ಹಾಲಿಗೆ 41 ರೂ; ಹೋಮೋಜಿನೈಸ್ಡ್ ದನದ ಹಾಲಿಗೆ 45ರೂ, ವಿಶೇಷ ಹಾಲಿಗೆ 46 ರೂ, ಶುಭಂ ಹಾಲಿಗೆ 46 ರೂ, ಹೋಮೋಜಿನೈಸ್ಡ್ ಸ್ಟ್ಯಾಂಡರ್ಡ್ ಹಾಲಿಗೆ 47 ರೂ, ಸಮೃದ್ದಿ ಹಾಲಿಗೆ 51 ರೂ, ಸಂತೃಪ್ತಿ ಹಾಲಿಗೆ 53 ರೂ, ಡಬಲ್ ಟೋನ್ಡ್ ಹಾಲಿಗೆ 39 ರೂ ಮತ್ತು ಮೊಸರಿಗೆ 48 ರೂ ಬೆಲೆ ಏರಿಕೆ ಮಾಡುವುದಾಗಿ ಕೆಎಂಎಫ್ ಘೋಷಿಸಿತ್ತು. ಆದರೆ ಇದೀಗ ಮುಖ್ಯಮಂತ್ರಿಗಳ ಮಧ್ಯಪ್ರವೇಶದಿಂದ ಬೆಲೆ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದ್ದು, ಹಿಂದಿನ ದರದಲ್ಲಿಯೇ ಹಾಲು ಸರಬರಾಜು ಮಾಡಲಾಗುವುದು.
ಕರ್ನಾಟಕದ ಹೈನುಗಾರರಿಗೆ ಸಹಾಯ ಮಾಡಲು ಹಾಲು ಮತ್ತು ಮೊಸರಿನ ಬೆಲೆಯನ್ನು ಹೆಚ್ಚಿಸಬೇಕು. ಈ ಹೆಚ್ಚುವರಿ ಮೊತ್ತವು ನೇರವಾಗಿ ರೈತರಿಗೆ ಸಲ್ಲುತ್ತದೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನ ಪರಿಸ್ಥಿತಿಯಿಂದಾಗಿ ಜಾನುವಾರುಗಳ ಮೇವು ಮತ್ತು ಹುಲ್ಲು ದೊರೆಯುವುದು ದುಸ್ತರವಾಗಿದ್ದು, ಇವುಗಳ ಬೆಲೆ ಏರಿಕೆಯಾಗಿರುವುದರಿಂದ ಹೈನುಗಾರರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
2020ರಲ್ಲಿ ಹಾಲಿನ ದರವನ್ನು 2 ರೂ.ಗಳಷ್ಟು ಹೆಚ್ಚಿಸಲಾಗಿತ್ತು ಎಂದು ಕೆಎಂಎಫ್ ಮೂಲಗಳು ತಿಳಿಸಿವೆ. ಹಾಲಿನ ದರ 3ರೂಪಾಯಿಗಳಷ್ಟು ಏರಿಕೆಯ ಸುದ್ದಿ ತಿಳಿದ ಗ್ರಾಹಕರು, ದರ ಏರಿಕೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಮತ್ತು ದರ ಏರಿಸದಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.












