ಸುರತ್ಕಲ್ ಟೋಲ್ ಗೇಟ್ ರದ್ದಿಗೆ ಕೇಂದ್ರ ಅಸ್ತು: ಟ್ವೀಟ್ ಮಾಡಿ ಮಾಹಿತಿ ನೀಡಿದ ಸಂಸದ

ಸುರತ್ಕಲ್: ಕಳೆದ ಏಳು ವರ್ಷಗಳ ನಿರಂತರ ಬೇಡಿಕೆ ಮತ್ತು ಎಡೆಬಿಡದ ಹೋರಾಟದ ಬಳಿಕ ಕಡೆಗೂ ಸುರತ್ಕಲ್ ಟೋಲ್ ಗೇಟ್ ರದ್ದಾಗಿ ಜನರಿಗೆ ನರಕದಿಂದ ಮುಕ್ತಿ ದೊರೆಯಲಿದೆ. ಟೋಲ್ ಗೇಟ್ ರದ್ದಾಗುವ ಬಗ್ಗೆ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂಧನ ಸಚಿವ ವಿ ಸುನಿಲ್ ಕುಮಾರ್ ಕೂಡಾ ಟೋಲ್ ಗೇಟ್ ರದ್ದು ಮಾಡಿರುವುದಕ್ಕಾಗಿ ಕೇಂದ್ರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಮಧ್ಯೆ, ಸುರತ್ಕಲ್‌ನಲ್ಲಿ ರಾ.ಹೆ 66ರಲ್ಲಿ ಟೋಲ್ ಸಂಗ್ರಹವನ್ನು ನಿಲ್ಲಿಸುವವರೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರಿಸಲು ಸಮಿತಿ ನಿರ್ಧರಿಸಿದೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಟೋಲ್ ಗೇಟ್ ತೆರವು ಮಾಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮಾಡಿರುವ ಟ್ವೀಟ್ ಅನ್ನು ಈಗಷ್ಟೇ ಓದಿದ್ದೇವೆ. ಅಹೋರಾತ್ರಿ ಧರಣಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಿಲ್ಲಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಟೋಲ್ ಗೇಟ್ ತೆರವು ಮಾಡುವವರೆಗೆ ಕಾಯುತ್ತೇವೆ. ಟೋಲ್ ಗೇಟ್ ರದ್ದುಗೊಳಿಸುವ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈಗಲೂ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಮುಂದುವರಿದಿದೆ ಎಂದು ಅವರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.