ಉದಯಪುರ: ಅಕ್ಟೋಬರ್ 31 ರಂದು ಅಸರ್ವ ರೈಲು ನಿಲ್ದಾಣದಿಂದ ಉದಯಪುರ-ಅಹಮದಾಬಾದ್ ರೈಲ್ವೆ ಹಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು, ಈ ಹಳಿಯಲ್ಲಿ ಸ್ಪೋಟಕಗಳನ್ನಿರಿಸಿ ರೈಲ್ವೆ ಹಳಿಯನ್ನು ಘಾಸಿಗೊಳಿಸಿ ರೈಲು ಅಪಘಾತ ನಡೆಸಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಣಾಪಾಯ ಮಾಡುವ ಸಂಚು ನಡೆಸಿದ್ದು, ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಉದಯಪುರ ಮತ್ತು ಅಹಮದಾಬಾದ್ ನಡುವೆ ಹೊಸದಾಗಿ ತೆರೆಯಲಾದ ರೈಲು ಮಾರ್ಗದಲ್ಲಿ “ಡಿಟೋನೇಟರ್” ಬಳಸಿ ಸ್ಫೋಟ ನಡೆಸಿದ್ದರಿಂದ ರೈಲ್ವೆ ಟ್ರ್ಯಾಕ್‌ನಲ್ಲಿ ಬಿರುಕುಗಳು ಕಂಡುಬಂದಿದ್ದವು. ಇದು ಉದ್ದೇಶಪೂರ್ವಕವಾಗಿ ನಡೆಸಲಾದ ಭಯೋತ್ಪಾದಕ ಕೃತ್ಯ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ ಎಂದು ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ. ಭಯೋತ್ಪಾದನೆಯ ಉದ್ದೇಶದಿಂದ ಬಾಂಬ್ ಅನ್ನು ಸ್ಥಾಪಿಸಲಾಗಿದೆ ಮತ್ತು “ಡಿಟೋನೇಟರ್” ಗಾಗಿ ಸ್ಥಳೀಯವಾಗಿ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮ ಹೇಳಿದೆ.
ಭಯೋತ್ಪಾದಕ ಗುಂಪುಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಥಳೀಯ ಹುಡುಗರನ್ನು ಗುರುತಿಸಿ ಅವರಿಗೆ ಹಣವನ್ನು ಪಾವತಿಸಿ ಅವರಿಂದ ಭಯೋತ್ಪಾದಕ ಕೃತ್ಯಗಳನ್ನು ಮಾಡಿಸಲು ಹೊಸ ವಿಧಾನಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿವೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಇತ್ತೀಚೆಗೆ ಮಹಾರಾಷ್ಟ್ರದ ಹತ್ತಿ ಗೋಡೌನ್ ನಲ್ಲಿ ಉಂಟಾದ ಬೆಂಕಿ ಆಕಸ್ಮಿಕದ ಬಗ್ಗೆ ಗುಪ್ತಚರ ಸಂಸ್ಥೆಗಳ ಗಮನವನು ಹರಿಸಿದೆ. ಆಕಸ್ಮಿಕ ಬೆಂಕಿಯ ಹೆಸರಿನಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಮುಚ್ಚಿದ್ದಾರೆ ಆದರೆ ತನಿಖೆಯಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಾಗ ಅದು ಭಯೋತ್ಪಾದಕ ಸಂಘಟನೆ ಐಎಸ್‌ಐನಿಂದ ಸಂಯೋಜಿತ ಕೃತ್ಯ ಮತ್ತು ಈ ಕೆಲಸಕ್ಕೆ 3 ಲಕ್ಷ ರೂ. ಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಗುರುಗ್ರಾಮ್ ನಲ್ಲಿರುವ ಘಟಕದಿಂದ ಬಿಟ್‌ಕಾಯಿನ್ ಮೂಲಕ ಹಣವನ್ನು ಪಾವತಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ ವರದಿಯಾಗಿದೆ.
ಉದಯಪುರ ಮತ್ತು ಅಹಮದಾಬಾದ್ ನಡುವಿನ ರೈಲು ಮಾರ್ಗಕ್ಕೆ ಹಾನಿಯಾಗಿರುವ ಬಗ್ಗೆ ಸ್ಥಳೀಯರು ಭಾನುವಾರ ವರದಿ ಮಾಡಿದ ನಂತರ ಸಂಭವನೀಯ ದುರಂತವನ್ನು ತಪ್ಪಿಸಲಾಗಿದೆ. ಸ್ಥಳದಿಂದ ಡಿಟೋನೇಟರ್‌ಗಳು ಮತ್ತು ಗನ್‌ಪೌಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ದೊಡ್ಡ ಪಿತೂರಿಯೊಂದು ನಡೆಯುವುದರ ಬಗ್ಗೆ ಸುಳಿವು ನೀಡಿದೆ. ಉದಯಪುರ ಭಯೋತ್ಪಾದನಾ ವಿರೋಧಿ ದಳದ (ಎಟಿಎಸ್) ಅಧಿಕಾರಿಗಳು ಭಯೋತ್ಪಾದನೆ ಬಗ್ಗೆ ಪರಿಶೀಲಿಸಲು ಘಟನಾ ಸ್ಥಳಕ್ಕೆ ತೆರಳಲು ಇದು ಪ್ರೇರೇಪಿಸಿದೆ.
ಅಹಮದಾಬಾದ್-ಉದಯಪುರ ಮಾರ್ಗದಲ್ಲಿರುವ ಅಸರ್ವ ರೈಲು ನಿಲ್ದಾಣವು ಈಗ ಅಹಮದಾಬಾದ್‌ನ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಸಂಚು ರೂಪಿಸಿದ ಆರೋಪಗಳನ್ನು ಒಳಗೊಂಡಿರುವ ಸೆಕ್ಷನ್‌ಗಳ ಅಡಿಯಲ್ಲಿ ರಾಜಸ್ಥಾನ ಪೊಲೀಸರು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಹಳಿಯನ್ನು ದುರಸ್ತಿ ಮಾಡಲಾಗುತ್ತಿದ್ದು, ಪ್ರಾಥಮಿಕ ತನಿಖೆ, ಛಾಯಾಚಿತ್ರಗಳನ್ನು ತೆಗೆಯುವುದು ಮತ್ತು ಪುರಾವೆಗಳನ್ನು ಸಂಗ್ರಹಿಸುವುದು ಮುಗಿದ ಮೂರು ಅಥವಾ ನಾಲ್ಕು ಗಂಟೆಗಳಲ್ಲಿ ರೈಲುಗಳು ಮತ್ತೆ ಓಡಲು ಪ್ರಾರಂಭಿಸುತ್ತವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.