ಇಂದಿರಾನಗರ ಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ

 

ಉಡುಪಿ:  ಚೈಲ್ಡ್ ಲೈನ್-1098 ಉಡುಪಿ ವತಿಯಿಂದ ಸರಕಾರಿ ಪ್ರೌಢಶಾಲೆ ಇಂದಿರಾನಗರದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ವಯಲೆಟ್ ಫೆಮೀನಾ ಮಕ್ಕಳ ಜೊತೆ ಸಂವಹನ ಮಾಡುವುದರ ಮೂಲಕ ಮಕ್ಕಳಿಗೆ ಕಾನೂನಿನಬಗ್ಗೆ ವಿವರಿಸುತ್ತಾ ಅಪರಾಧ ಮತ್ತು ಪೋಕ್ಸೋ ಕಾಯಿದೆ, ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ    ತಮ್ಮ ಕರ್ತವ್ಯಗಳನ್ನು ತಿಳಿಸಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವಗಳನ್ನು ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಬೇಕು, ಕೆಲವು ಕೆಟ್ಟ ಆಕರ್ಷಣೆ ಇಂದಾಗಿ ಮಕ್ಕಳ ಭವಿಷ್ಯವು ಮೋಸದ ಬಲೆಯಲ್ಲಿ ಸಿಕ್ಕಿ  ನರಳುತ್ತದೆ.   ಮಕ್ಕಳು ಅಪರಿಚಿತರ ಕುರಿತಾಗಿ ಸದಾ ಎಚ್ಚರದಿಂದ ಇರಬೇಕು, ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾದಲ್ಲಿ ಮಕ್ಕಳು ಪೊಲೀಸ್ ಅಥವಾ ಚೈಲ್ಡ್ ಲೈನ್-1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್ಸಸ್ಟೆಬಲ್ ಶ್ರೀಮತಿ ಜ್ಯೋತಿ  ಮಕ್ಕಳಿಗೆ ಸಂಬಂಧಿಸಿದ ಇಲಾಖೆಯ ಕುರಿತು, ಪ್ರಚಲಿತದಲ್ಲಿರುವ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ವಿವರಿಸುತ್ತಾ ಮಕ್ಕಳಿಗೆ ಆಪ್ತಸಮಾಲೋಚನೆಯನ್ನು ಮಾಡುವುದರ ಮೂಲಕ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಅವಶ್ಯಕತೆಗಳಿಗಿಂತ ಹೆಚ್ಚಿನ ಮೊಬೈಲ್ ಬಳಕೆಯಿಂದಾಗುವ ತೊಂದರೆಗಳ ಕುರಿತು ಮಾಹಿತಿ ನೀಡಿ ಸಾಮಾಜಿಕ ಜಾಲ ತಾಣಗಳ ಬಳಕೆಯ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕೆಂಬ ಕಿವಿ ಮಾತು ಹೇಳಿದರು.

ಮುಖ್ಯೋಪಾಧ್ಯಾಯ ಗಿರೀಶ್ ನಾಯಕ್  ಮಕ್ಕಳನ್ನು ಉದ್ದೇಶಿಸಿ ಮಾತನಾಡಿ,   ಮಕ್ಕಳಿಗೆ ಸಮಸ್ಯೆಗಳಾದಾಗ ನಂಬಿಕಸ್ಥ ವ್ಯಕ್ತಿ ಯಾ ಶಿಕ್ಷಕರೊಂದಿಗೆ ಮಾತನಾಡಿ ಅಥವಾ ತಂದೆ-ತಾಯಿಯೊಂದಿಗೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಹಾಗೂ ಯಾವುದೇ ಸಂದರ್ಭದಲ್ಲಿ ಮಕ್ಕಳು ನಕರಾತ್ಮಕ ಭಾವನೆಗಳನ್ನು ಬೆಳಸಿಕೊಳ್ಳದೇ ಸಕರಾತ್ಮಕ ಭಾವನೆಗಳನ್ನು ರೂಪಿಸಿಕೊಂಡಾಗ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಮತ್ತು ಚೈಲ್ಡ್ ಲೈನ್-1098 ಸಿಬ್ಬಂದಿಗಳು ಉಪಸ್ಥಿತರಿದ್ದರು.

ಚೈಲ್ಡ್ಲೈನ್-1098 ಉಡುಪಿಯ ಆಪ್ತಸಮಾಲೋಚಕಿ ಕು. ನಯನ ಕಾರ್ಯಕ್ರಮವನ್ನು ನಿರೂಪಿಸಿ, ಚೈಲ್ಡ್ ಲೈನ್ ಸಿಬ್ಬಂದಿಗಳಾದ ಕು.ರೇಷ್ಮಾ ವಂದಿಸಿದರು.