ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ 14 ಕ್ಕೆ ಏರಿಕೆ

ಮಂಗಳೂರು: ಜುಲೈ 26 ರಂದು ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಶನಿವಾರದಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ ಎಂದು ವರದಿಯಾಗಿದೆ. ಸುಳ್ಯ ನಿವಾಸಿ ಶಾಹಿದ್‌ ಬೆಳ್ಳಾರೆ ಬಂಧಿತ ಆರೋಪಿ ಎನ್ನಲಾಗಿದೆ.

ಸುಳ್ಯದ ಶಾಹಿದ್ ಬೆಳ್ಳಾರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆಯ ಸಂಬಂಧಿಕನಾಗಿದ್ದಾನೆ ಎನ್ನಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಭೇದಿಸಲು ಎನ್‌ಐಎ ಎಲ್ಲ ಕಡೆಯೂ ಶೋಧ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಸುತ್ತಮುತ್ತ ಆರೋಪಿಗಳಿಗಾಗಿ ಬಲೆ ಬೀಸಿದೆ. ಎನ್​ಐಎ ಅಧಿಕಾರಿಗಳ ಆರು ತಂಡಗಳು ಪುತ್ತೂರು, ಬೆಳ್ಳಾರೆ, ಸುಳ್ಯ , ಮೈಸೂರು, ಹುಬ್ಬಳ್ಳಿ ಪರಿಸರದಲ್ಲಿ ಶೋಧ ಕಾರ್ಯದಲ್ಲಿ ನಿರತವಾಗಿವೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಲು ಸಾರ್ವಜನಿಕ ಸಹಕಾರ ಬಯಸಿದ್ದ ತನಿಖಾ ಸಂಸ್ಥೆ, ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ 14 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿತ್ತು. ಮೊಹಮ್ಮದ್ ಮುಸ್ತಫಾ ಮತ್ತು ತುಫೈಲ್ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಉಮರ್ ಫಾರೂಕ್‌ ಹಾಗೂ ಅಬೂಬಕರ್ ಸಿದ್ದಿಕ್‌ ಬಗ್ಗೆ ಮಾಹಿತಿ ನೀಡಿದರೆ 2 ಲಕ್ಷ ರೂ ನಗದು ಬಹುಮಾನ ನೀಡುವಾಗಿ ರಾಷ್ಟ್ರೀಯ ತನಿಖಾ ದಳ ಘೋಷಿಸಿತ್ತು. ಇದೀಗ ಶಾಹಿದ್‌ ಬಂಧನ ಸೇರಿ ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.