ಬಹುಮುಖ ಪ್ರತಿಭೆ ಮುದ್ದು ಮೂಡುಬೆಳ್ಳೆಯವರಿಗೆ ರಂಗ ಚಾವಡಿ 2022 ಪ್ರಶಸ್ತಿ

ಮಂಗಳೂರು: ಪ್ರತಿಷ್ಠಿತ ರಂಗ ಚಾವಡಿ 2022ರ ಪ್ರಶಸ್ತಿಗೆ ಸಾಹಿತಿ, ಜಾನಪದ ವಿದ್ವಾಂಸ ಮುದ್ದು ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 20 ರಂದು ಭಾನುವಾರ ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಇವರು ತನ್ನ16 ನೇ ವಯಸ್ಸಿನಿಂದ ಜಾನಪದ ಸಾಹಿತ್ಯದ ಕಡೆಗೆ ಆಕರ್ಷಿತರಾಗಿದ್ದಾರೆ. ಸರಕಾರದ ನ್ಯಾಯಾಂಗ ಹಾಗೂ ಪ್ರಸಾರ ಇಲಾಖೆಯಲ್ಲಿ ಹಾಗೂ ಆಕಾಶವಾಣಿಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಮಂಗಳೂರು ವಿಶ್ವವಿದ್ಯಾಲಯದ ಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಹಾಗೂ ತುಳುವಿನಲ್ಲಿ ಹಲವಾರು ಸಾಹಿತ್ಯ ಕೃತಿಗಳನ್ನು ಹೊರ ತಂದಿರುವ ಇವರು 7 ಕಥಾ ಸಂಕಲನ, 3 ಕವನ ಸಂಕಲನ, 3 ಕಾದಂಬರಿ, ಕಾಂತಾಬಾರೆ ಬೂದಾಬಾರೆ ಕುರಿತು ಸಂಶೋಧನೆ, ತುಳು ರಂಗಭೂಮಿ ಸಮಗ್ರ ಅಧ್ಯಯನ, ತುಳುನಾಡಿನ ಜಾನಪದ ವಾದ್ಯಗಳು, ಮೂಲ್ಕಿಯ ಸಾವಂತ ಅರಸರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕಾಪು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಇವರು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಕ್ಷೇತ್ರದ ಬಗ್ಗೆ ಆಮೂಲಾಗ್ರ ಸಂಶೋಧನೆ ನಡೆಸಿ ಕೃತಿಗಳನ್ನು ರಚಿಸಿದ್ದಾರೆ.

ಮುದ್ದು ಮೂಡುಬೆಳ್ಳೆಯವರ ಅನನ್ಯ ಸೇವೆಯನ್ನು ಗುರುತಿಸಿರುವ ರಂಗಚಾವಡಿ ಪ್ರಶಸ್ತಿ ಆಯ್ಕೆ ಸಮಿತಿಯು 2022 ರ ಸಾಲಿನ ರಂಗಚಾವಡಿ ಪ್ರಶಸ್ತಿಯನ್ನು ಮುದ್ದುಮೂಡುಬೆಳ್ಳೆ ಅವರಿಗೆ ನೀಡಿದೆ. ಹಿರಿಯ ರಂಗ ನಟ ವಿ.ಜಿ.ಪಾಲ್, ಚಲನ ಚಿತ್ರ ನಿರ್ದೇಶಕ ಡಾ ಸಂಜೀವ ದಂಡೆಕೇರಿ ಹಾಗೂ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಮುಂತಾದವರು ಆಯ್ಕೆ ಸಮಿತಿಯಲ್ಲಿದ್ದಾರೆ.