ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ, ಯುಕಾಟಾನ್ ಪರ್ಯಾಯ ದ್ವೀಪದ ಬಳಿ ಸುಮಾರು 6.2 ಮೈಲುಗಳಷ್ಟು (10 ಕಿಲೋಮೀಟರ್) ದೊಡ್ಡದಾಗಿರುವ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿತ್ತು. ಈ ಕ್ಷುದ್ರಗ್ರಹದ ಬಡಿತ ಹೇಗಿತ್ತೆಂದರೆ ಸಂಪೂರ್ಣ ಭೂಗ್ರಹವು ಕತ್ತಲೆಯಲ್ಲಿ ಮುಳುಗಿತ್ತು ಮತ್ತು ಭೂಮಿಯ ಮೇಲಿನ 80% ಪ್ರಾಣಿಗಳ ಜೀವಿತಾವಧಿಯನ್ನು ನಾಶಮಾಡುವಂತಹ ಸಾಮೂಹಿಕ ಅಳಿವಿಗೆ ಕಾರಣವಾಗಿತ್ತು. ಭೂಮಿಯ ಮೇಲಿನ ಬೃಹದಾಕಾರದ ಪ್ರಾಣಿಗಳಾಗಿದ್ದ ಡೈನೋಸಾರ್ ಗಳನ್ನು ಈ ಕ್ಷುದ್ರಗ್ರಹವು ಹೇಳಹೆಸರಿಲ್ಲದಂತೆ ನಾಶಮಾಡಿ ಬಿಟ್ಟಿತ್ತು.
ಜಿಯೋಲಾಜಿಕಲ್ ಸೊಸೈಟಿ ಆಫ್ ಅಮೇರಿಕಾದ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಿದ ಹೊಸ ಸಂಶೋಧನೆಯ ಪ್ರಕಾರ, ಕ್ಷುದ್ರಗ್ರಹದ ಘರ್ಷಣೆಯಿಂದ ಉಂಟಾದ ಪ್ರಚಂಡ ಮತ್ತು ಬೃಹತ್ ಕಂಪನವು ಗಲ್ಫ್ ಆಫ್ ಮೆಕ್ಸಿಕೊದ ಸುತ್ತಲಿನ ಬಂಡೆಗಳಲ್ಲಿ ತನ್ನ ಗುರುತನ್ನು ಬಿಟ್ಟಿದೆ.
ನ್ಯೂಜೆರ್ಸಿಯ ಮಾಂಟ್ಕ್ಲೇರ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಭೂವಿಜ್ಞಾನದ ಡಾಕ್ಟರೇಟ್ ವಿದ್ಯಾರ್ಥಿ ಹರ್ಮನ್ ಬರ್ಮುಡೆಜ್, ಕೊಲಂಬಿಯಾ, ಮೆಕ್ಸಿಕೊ, ಟೆಕ್ಸಾಸ್, ಅಲಬಾಮಾ ಮತ್ತು ಮಿಸ್ಸಿಸ್ಸಿಪ್ಪಿಗಳಲ್ಲಿ ಭೂಕಂಪದ ಪರಿಣಾಮವಾಗಿ ವಿರೂಪಗೊಂಡ ಮತ್ತು ಬಿರುಕು ಬಿಟ್ಟಿರುವ ಕಲ್ಲಿನ ಪದರಗಳನ್ನು ಮತ್ತು ಬಡಿತದ ಪರಿಣಾಮದಿಂದ ಉಂಟಾದ ದೈತ್ಯ ಸುನಾಮಿಗಳ ಕೆಲವು ಅವಶೇಷಗಳನ್ನು ಕಂಡುಹಿಡಿದ್ದಿದ್ದಾರೆ ಎನ್ನಲಾಗಿದೆ.
ಈ ತಿರುಚಿದ ಮತ್ತು ಕೊರಕಲಾಗಿರುವ ಕೆಲವು ಪದರಗಳು ಪರಾಗದ ಪುರಾವೆಗಳನ್ನು ಸಹ ಹೊಂದಿವೆ. ಕ್ಷುದ್ರಗ್ರಹದ ಡಿಕ್ಕಿಯ ಪರಿಣಾಮದ ನಂತರ ಕನಿಷ್ಠ ಆರು ತಿಂಗಳ ನಂತರ ಸಸ್ಯವರ್ಗವು ಚೇತರಿಸಿಕೊಳ್ಳಲು ಪ್ರಾರಂಭಿಸಿತು ಎಂದು ಬರ್ಮುಡೆಜ್ ಲೈವ್ ಸೈನ್ಸ್ಗೆ ತಿಳಿಸಿದ್ದಾರೆ. ಇಲ್ಲಿನ ಸುತ್ತಮುತ್ತಲಿನ ಸಸ್ಯಗಳು ಚೇತರಿಸಿಕೊಂಡು ಮತ್ತೊಮ್ಮೆ ಬೆಳೆಯಲು ಪ್ರಯತ್ನ ಪಡುತ್ತಿರುವಾಗಲೂ ಈ ಪದರಗಳು ವಿರೂಪಗೊಂಡಿವೆ ಎಂಬ ಅಂಶವು ಡಿಕ್ಕಿಯ ಪ್ರಭಾವದಿಂದ ಪ್ರಚೋದಿಸಲ್ಪಟ್ಟ ಭೂಕಂಪಗಳು ತಿಂಗಳುಗಳ ಕಾಲ ನಡೆದಿದೆ ಎಂಬುದನ್ನು ತೋರಿಸುತ್ತದೆ.
ಚಿಕ್ಸುಲಬ್ ಪ್ರಭಾವ –
ಯುಕಾಟಾನ್ ಪೆನಿನ್ಸುಲಾದಲ್ಲಿ ಬಾಹ್ಯಾಕಾಶ ಬಂಡೆಯೆ ಅಪ್ಪಳಿಸುವಿಕೆಯಿಂದಾದ ಕುಳಿಯ ಸಮೀಪವಿರುವ ಪ್ರಭಾವಕ್ಕೆ ‘ಚಿಕ್ಸುಲಬ್ ಪ್ರಭಾವ’ ಎಂದು ಹೆಸರಿಸಲಾಗಿದೆ. ಸುಮಾರು 66 ದಶಲಕ್ಷ ವರ್ಷಗಳ ಹಿಂದೆ ಕ್ಷುದ್ರಗ್ರಹದ ಭಾಗವು ಭೂಮಿಗೆ ಅಪ್ಪಳಿಸಿದಾಗ, ಅದು 10 ಶತಕೋಟಿ ಹಿರೋಷಿಮಾ ಬಾಂಬ್ಗಳಿಗೆ ಸಮಾನವಾದ ಶಕ್ತಿಯನ್ನು ಬಿಡುಗಡೆ ಮಾಡಿತು ಮತ್ತು 110-ಮೈಲಿ-ಅಗಲ (180 ಕಿಮೀ) ಕುಳಿಯನ್ನು ಬಿಟ್ಟಿತು ಎಂದು ಬರ್ಮುಡೆಜ್ ಹೇಳಿದ್ದಾರೆ. ಇದು 2004 ರ ಸುಮಾತ್ರಾ ಭೂಕಂಪದಿಂದ ಉಂಟಾದ ಭೂಕಂಪನ ಶಕ್ತಿಯ 50,000 ಪಟ್ಟು ಹೆಚ್ಚು. ಈ ಭೂಕಂಪವು 100 ಮೀಟರ್ (330 ಅಡಿ) ಎತ್ತರದ ಬೃಹತ್ ಸುನಾಮಿಗಳನ್ನು ಹುಟ್ಟುಹಾಕಿತು, ಪರಿಣಾಮದಿಂದ ಉಂಟಾದ ತಕ್ಷಣದ ಅಲೆಗಳು 1.5 ಕಿಲೋಮೀಟರ್ (0.93 ಮೈಲಿ) ಎತ್ತರವನ್ನು ತಲುಪಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸುತ್ತಾರೆ.
ಈ ಡಿಕ್ಕಿಯು 11 ಕ್ಕಿಂತ ಹೆಚ್ಚು ತೀವ್ರತೆಯೊಂದಿಗೆ ಭೂಕಂಪಗಳನ್ನು ಪ್ರಚೋದಿಸಿತು ಮತ್ತು ಚಿಕ್ಸುಲಬ್ ಪ್ರಭಾವವು ಒಂದು ಮೈಲಿ ಎತ್ತರದ ಅಲೆಗಳೊಂದಿಗೆ ಸುನಾಮಿಗಳನ್ನು ಪ್ರಚೋದಿಸಿತು. ಕ್ಷುದ್ರಗ್ರಹದ ಅಪ್ಪಳಿಕೆಯ ವೇಗವನ್ನು ಸೆಕೆಂಡಿಗೆ 20 ಕಿಲೋಮೀಟರ್ಗಳು (12 ಮೈಲಿ/ಸೆ) ಎಂದು ಅಂದಾಜಿಸಲಾಗಿದೆ. ಈ ಪ್ರಭಾವದ ಚಲನ ಶಕ್ತಿಯು 100,000 ಗಿಗಾಟನ್ಗಳಷ್ಟುಎಂದು ಅಂದಾಜಿಸಲಾಗಿದೆ. ಸ್ಫೋಟದ ಕೇಂದ್ರದ ಬಳಿ ಗಂಟೆಗೆ 1,000 ಕಿಲೋಮೀಟರ್ಗಳಷ್ಟು (620 mph) ವೇಗದಲ್ಲಿ ಗಾಳಿಯನ್ನು ಸೃಷ್ಟಿಸಿತ್ತು ಮತ್ತು 100 ಕಿಮೀ ಅಗಲ ಮತ್ತು 30 ಕಿಮೀ ಆಳದ ಅಸ್ಥಿರ ಕುಳಿಯನ್ನು ಸೃಷ್ಟಿಸಿತ್ತು. ಬಿಸಿ ಧೂಳು, ಬೂದಿ ಮತ್ತು ಆವಿಯ ಮೋಡವು ಕುಳಿಯಿಂದ ಹೊರ ನುಗ್ಗಿದ್ದಲ್ಲದೆ, ಸ್ಫೋಟದಿಂದ ವಾತಾವರಣಕ್ಕೆ 25 ಟ್ರಿಲಿಯನ್ ಮೆಟ್ರಿಕ್ ಟನ್ಗಳಷ್ಟು ಉತ್ಖನನದ ವಸ್ತುಗಳನ್ನು ಹೊರಬಿದ್ದಿದ್ದವು. ಕೆಲವು ವಸ್ತುಗಳಂತೂ ಭೂ ಕಕ್ಷೆಯಿಂದ ತಪ್ಪಿಸಿಕೊಂಡು ಸೌರವ್ಯೂಹದಾದ್ಯಂತ ಹರಡಿ ಮತ್ತೆ ಬಿಸಿಯುಂಡೆಗಳಾಗಿ ಭೂಮಿಯೆಡೆಗೆ ಹಿಂತಿರುಗಿತ್ತು. ಕ್ಷುದ್ರಗ್ರಹವು ಭೂಮಿಯ ಮೇಲ್ಮೈಯನ್ನು ಎಷ್ಟು ಬಿಸಿಮಾಡಿತ್ತೆಂದರೆ ಕಾಳ್ಗಿಚ್ಚುಗಳನ್ನು ಹೊತ್ತಿಸಿ ಗ್ರಹದ ಸುಮಾರು 70% ಕಾಡುಗಳನ್ನು ಸುಟ್ಟು ಹಾಕಿತ್ತು.
ಭೂಮಿಯ ಮೇಲೆ ಇಷ್ಟೆಲ್ಲಾ ಅನಾಹುತಗಳನ್ನು ಮಾಡಿದ್ದರೂ ಈ ಕ್ಷುದ್ರಗ್ರಹವು ಇತರ ಸಣ್ಣ ಪುಟ್ಟ ಪ್ರಾಣಿಸಂಕುಲಕ್ಕೆ ಒಳ್ಳೆಯದನ್ನು ಮಾಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ, ಅಂದು ಕ್ಷುದ್ರಗ್ರಹ ಬಡಿಯದೆ ಇದ್ದು, ಭೂಮಿಯ ಮೆಲಿನ ದೈತ್ಯಾಕಾರದ ಡೈನೋಸಾರ್ ಗಳು ವಿನಾಶ ಹೊಂದಿಲ್ಲದಿರುತ್ತಿದ್ದರೆ ಸಣ್ಣ ಪುಟ್ಟ ಪ್ರಾಣಿಗಳು ಭೂಮಿಯ ಮೇಲೆ ಬದುಕಿ ಜೀವ ವಿಕಾಸವಾಗುತ್ತಿರಲಿಲ್ಲ ಎನ್ನುವುದು ಇವರ ಅಂಬೋಣ. ಇಂತಹ ಅದಿನ್ನೆಷ್ಟು ಕ್ಷುದ್ರಗ್ರಹಗಳು ಸೌರಮಂಡಲದಲ್ಲಿವೆಯೋ? ಅವುಗಳಲ್ಲಿ ಯಾವ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿ ವಿನಾಶ ಮಾಡುತ್ತದೋ ಎನ್ನುವುದನ್ನು ಅಂತರಿಕ್ಷ ವಿಜ್ಞಾನಿಗಳೂ ನಿಖರವಾಗಿ ಹೇಳಲಾಗುವುದಿಲ್ಲ ಎನ್ನುವುದಂತೂ ವಾಸ್ತವ.