ಐಟಿ ಬಿಟಿ ಕಂಪನಿಗಳಿಗಿಂತಲೂ ಶ್ರೀಮಂತ ತಿರುಮತಿ ತಿಮ್ಮಪ್ಪ: ದೇವಸ್ಥಾನದ ನಿವ್ವಳ ಮೌಲ್ಯ 2.5 ಲಕ್ಷ ಕೋಟಿ ರೂಪಾಯಿಗಳು

ಹೈದರಾಬಾದ್: ತಿರುಪತಿಯ ಜಗತ್ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಮೌಲ್ಯ ರೂ 2.5 ಲಕ್ಷ ಕೋಟಿ (ಸುಮಾರು 30 ಶತಕೋಟಿ ಡಾಲರ್) ಯಾಗಿದ್ದು ಇದು ದೇಶದ ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ಒ.ಎನ್.ಜಿ.ಸಿ ಮತ್ತು ಐಒಸಿ ಅಂತಹ ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ.

1933 ರಲ್ಲಿ ಸ್ಥಾಪನೆಯಾದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ಟ್ರಸ್ಟ್ ಇದೇ ಮೊದಲ ಬಾರಿಗೆ ತಿರುಪತಿಯ ಪ್ರಧಾನ ದೇವರ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಇದರ ಆಸ್ತಿಯಲ್ಲಿ ಬ್ಯಾಂಕ್‌ಗಳಲ್ಲಿ 10.25 ಟನ್ ಚಿನ್ನದ ಠೇವಣಿ, 2.5 ಟನ್ ಚಿನ್ನಾಭರಣ, ಬ್ಯಾಂಕ್‌ಗಳಲ್ಲಿ ಸುಮಾರು 16,000 ಕೋಟಿ ಠೇವಣಿ ಮತ್ತು ಭಾರತದಾದ್ಯಂತ 960 ಆಸ್ತಿಗಳು ಸೇರಿವೆ. ಇವೆಲ್ಲದರ ಒಟ್ಟು ಮೊತ್ತ 2.5 ಲಕ್ಷ ಕೋಟಿ ರೂಪಾಯಿಗಳು. ಸ್ಟಾಕ್ ಎಕ್ಸ್ಚೇಂಜ್ ಡೇಟಾ ಪ್ರಕಾರ, ಪ್ರಸ್ತುತ ವ್ಯಾಪಾರದ ಬೆಲೆಯಲ್ಲಿ, ತಿರುಪತಿ ದೇವಸ್ಥಾನದ ನಿವ್ವಳ ಮೌಲ್ಯವು ಹಲವಾರು ಬ್ಲೂ-ಚಿಪ್ ಭಾರತೀಯ ಸಂಸ್ಥೆಗಳಿಗಿಂತ ಹಲವು ಪಟ್ಟು ಹೆಚ್ಚಾಗಿದೆ.

ದೇಶದಲ್ಲಿ ಕೇವಲ ಎರಡು ಡಜನ್ ಕಂಪನಿಗಳು ಮಾತ್ರ ದೇವಾಲಯದ ಟ್ರಸ್ಟ್‌ನ ಒಟ್ಟು ಮೌಲ್ಯಕ್ಕಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ ಎನ್ನಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ದಿನದಿಂದ ದಿನಕ್ಕೆ ಶ್ರೀಮಂತವಾಗಿ ಬೆಳೆಯುತ್ತಿದ್ದು, ದೇವಸ್ಥಾನದಕ್ಕೆ ಭಕ್ತರು ನೀಡುವ ನಗದು ಮತ್ತು ಚಿನ್ನದ ಕಾಣಿಕೆಗಳು ಹೆಚ್ಚುತ್ತಲೇ ಇವೆ ಮತ್ತು ಬಡ್ಡಿದರಗಳ ಹೆಚ್ಚಳದ ದೃಷ್ಟಿಯಿಂದ ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿಗಳು ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಟಿಡಿ ಒಡೆತನದ ಆಸ್ತಿಗಳಲ್ಲಿ ಭಕ್ತರು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿದ ಭೂಮಿ, ಕಟ್ಟಡಗಳು, ಬ್ಯಾಂಕ್‌ಗಳಲ್ಲಿನ ನಗದು ಮತ್ತು ಚಿನ್ನದ ಠೇವಣಿಗಳು ಸೇರಿವೆ. ಭಕ್ತರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಏಳು ಬೆಟ್ಟಗಳ ಮೇಲಿನ ಕಾಟೇಜ್‌ಗಳು ಮತ್ತು ಅತಿಥಿ ಗೃಹಗಳು ಸೇರಿದಂತೆ ಬೆಲೆಬಾಳುವ ಪುರಾತನ ಆಭರಣಗಳು ಮತ್ತು ಆಸ್ತಿಗಳಿಗೆ ಮೌಲ್ಯವನ್ನು ನಿಗದಿಪಡಿಸುವುದು ತಪ್ಪುದಾರಿಗೆಳೆಯುವಂತಿದೆ ಮತ್ತು ಆದ್ದರಿಂದ ಇವು ಅಂದಾಜು ಸಾಮಾನ್ಯ ಆಸ್ತಿ ಮೌಲ್ಯದ ಭಾಗವಾಗುವುದಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಮಂಡಿಸಿದ 2022-23ರ ವಾರ್ಷಿಕ 3,100 ಕೋಟಿ ರೂ.ಗಳ ವಾರ್ಷಿಕ ಬಜೆಟ್‌ನಲ್ಲಿ, ಟಿಟಿಡಿ ಬ್ಯಾಂಕ್‌ಗಳಲ್ಲಿನ ನಗದು ಠೇವಣಿಗಳಿಂದ ಬಡ್ಡಿ ರೂಪದಲ್ಲಿ 668 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನುಅಂದಾಜಿಸಿದೆ. ಅಲ್ಲದೆ, ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ ಸುಮಾರು 2.5 ಕೋಟಿ ಭಕ್ತರಿಂದ ನಗದು ಕಾಣಿಕೆ ರೂಪದಲ್ಲಿ ಬರೋಬ್ಬರಿ 1,000 ಕೋಟಿ ಆದಾಯ ಬರಲಿದೆ ಎಂದು ಊಹಿಸಲಾಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.