ಉಡುಪಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ 40% ಕಮೀಷನ್ ಸರಕಾರದಿಂದ ಜನರು ಬೇಸತ್ತಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗದ ಉಸ್ತುವಾರಿ, ಕೇರಳದ ಶಾಸಕ ರೋಝಿ ಜೋನ್ ಹೇಳಿದರು.
ಅವರು ಬುಧವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಬಿಜೆಪಿ ಸರಕಾರ ಸಂಪೂರ್ಣ ಭ್ರಷ್ಠಾಚಾರದಲ್ಲಿ ಮುಳುಗಿದ್ದು ದೇಶದಲ್ಲಿಯೇ ಇತಿಹಾಸ ಸೃಷ್ಟಿಸಿದೆ. ಜನರು ಬದಲಾವಣೆಯನ್ನು ಬಯಸಿದ್ದು, ಪ್ರಸ್ತುತ ಸರಕಾರದಿಂದ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರದ ಪ್ರತಿಯೊಬ್ಬ ಶಾಸಕ ಹಣ ಮಾಡುವುದರಲ್ಲೇ ಮಗ್ನರಾಗಿದ್ದು, ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೊ ಯಾತ್ರೆಯಲ್ಲಿ ಜನರು ಅಭೂತಪೂರ್ವವಾದ ಬೆಂಬಲ ಸೂಚಿಸಿದ್ದು ಮುಂದಿನ ಚುನಾವಣೆಗೆ ಇದು ಸಹಕಾರಿಯಾಗಲಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ಕೂಡ ವಿಭಜನೆ ರಾಜಕೀಯಕ್ಕೆ ಬೆಂಬಲ ನೀಡುವುದಿಲ್ಲ. ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಾ ಪ್ರತಿಯೊಬ್ಬರನ್ನು ಪ್ರೀತಿಸುವುದು ನಮ್ಮ ಉದ್ದೇಶ ಎಂದರು.
ರಾಜ್ಯದ ಬಿಜೆಪಿ ಸರಕಾರ ಆಡಳಿತ ವಿರೋಧಿ ನೀತಿಯ ವಿರುದ್ದ ಎಲ್ಲರೂ ಹೋರಾಟ ನಡೆಸುವುದರ ಮೂಲಕ 40% ಸರಕಾರವನ್ನು ಕಿತ್ತೊಗೆಯಬೇಕಾಗಿದೆ. ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿಕೊಂಡು ಅದರ ಆಶಯದಂತೆ ನಡೆಯುತ್ತಿದ್ದು ರಾಹುಲ್ ಗಾಂಧಿಯವರ ಭಾರತ್ ಜೋಡೊ ಮೂಲಕ ಈಗಾಗಲೇ ಕೊಟ್ಯಾಂತರ ಜನರ ನಡುವೆ ನಾವು ಸಾಗಿದ್ದೇವೆ. ದೇಶದಾದ್ಯತಂತ ಒಡೆದ ಮನಸ್ಸುಗಳನ್ನು ಸೌಹಾರ್ದತೆಯ ಮೂಲಕ ಕಟ್ಟುವ ಕೆಲಸ ಮಾಡುತ್ತಿದ್ದು ಎಲ್ಲಾ ರಾಜ್ಯಗಳಲ್ಲಿ ಅತ್ಯುತ್ತಮವಾದ ಬೆಂಬಲ ಸಿಗುತ್ತಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರಿಂದ ರಾಜ್ಯಕ್ಕೆ ದೊಡ್ಡ ಶಕ್ತಿ ಬಂದಿದೆ. ಹಲವು ದಶಕಗಳ ಬಳಿಕ ಕರ್ನಾಟಕದವರೊಬ್ಬರು ಅಧ್ಯಕ್ಷರಾಗಿದ್ದಾರೆ. ಬ್ಲಾಕ್ ಮಟ್ಟದ ಅಧ್ಯಕ್ಷರಾಗಿದ್ದವರು ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಸ್ಪಷ್ಟ ಉದಾಹರಣೆ. ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ 6ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ನೀಡಲು ಉದ್ದೇಶಿಸಲಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ ಎ ಗಫೂರ್, ಕೆಪಿಸಿಸಿ ಸಂಯೋಜಕ ಹಬೀಬ್ ಆಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ನಾಯಕರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಸಂತೋಷ್ ಕುಲಾಲ್, ಅಣ್ಣಯ್ಯ ಕುಲಾಲ್, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತರರು ಉಪಸ್ಥಿತರಿದ್ದರು.