ಉಡುಪಿ, ಮೇ 29: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ 32 ನೇ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರವನ್ನು ಜೂನ್ 21 ರಿಂದ 24 ರ ವರೆಗೆ ಬೆಂಗಳೂರಿನ ಎಚ್.ಕೆ.ಇ.ಎಸ್ ಶ್ರೀ ವೀರೇಂದ್ರ ಪಾಟೀಲ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ.
4 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿಜ್ಞಾನ ಲೇಖನಗಳ ಬರಹ, ಲೇಖನ ಪ್ರಕಾರಗಳು, ಮಾಧ್ಯಮಕ್ಕೆ ಬರಹ, ವಿಜ್ಞಾನ ಬರಹದಲ್ಲಿನ ಸಮಸ್ಯೆಗಳು ಮುಂತಾದ ವಿಷಯದ ಬಗೆಗೆ ಮಾಹಿತಿ, ಪೂರಕ ಉಪನ್ಯಾಸಗಳನ್ನು ವಿಷಯ ತಜ್ಞರು ನೀಡಲಿದ್ದಾರೆ. ಆಸಕ್ತರು ತಮ್ಮ ಪರಿಣಿತಿ ಹಾಗೂ ಆಸಕ್ತಿಗೆ ಅನುಗುಣವಾಗಿ ಜೂನ್ 4 ರ ಒಳಗೆ ಎರಡು ವೈಜ್ಞಾನಿಕ ಲೇಖನಗಳನ್ನು ತಮ್ಮ ಹೆಸರು, ವಿಳಾಸ, ದೂರವಾಣಿ/ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸದೊಂದಿಗೆ ವಿಜ್ಞಾನ ಪರಿಷತ್ತಿನ ಇ-ಮೇಲ್ [email protected] ಗೆ ಕಳುಹಿಸಬೇಕು. ಈ ಹಿಂದೆ ಲೇಖನಗಳನ್ನು ಕಳುಹಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಕಳುಹಿಸುವ ಅಗತ್ಯವಿರುವುದಿಲ್ಲ.
ಲೇಖನಗಳು ವಿಜ್ಞಾನ ಪರಿಷತ್ತಿಗೆ ಬಂದನಂತರ ಅವುಗಳ ವಿಶ್ಲೇಷಣೆಯನ್ನು ಆಧರಿಸಿ ಬರಹಗಾರರನ್ನು ಶಿಬಿರಕ್ಕೆ ಆಹ್ವಾನಿಸಲಾಗುತ್ತದೆ. ಆಯ್ಕೆಯಾದ ಶಿಬಿರಾರ್ಥಿಗಳಿಗೆ ನಾಡಿನ ವಿಜ್ಞಾನ ಅಂಕಣಕಾರರು, ಹಿರಿಯ ವಿಜ್ಞಾನ ಲೇಖಕರು ಹಾಗೂ ವಿಜ್ಞಾನ ಕ್ಷೇತ್ರದ ಪರಿಣಿತರು ವಿಜ್ಞಾನ ಬರವಣಿಗೆ ಕುರಿತ ವಿವಿಧ ಕೌಶಲ್ಯ, ಆಕರ, ಶಬ್ದ ಬಳಕೆ ಮುಂತಾದ ಅಂಶಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ನೋಂದಣಿ ಉಚಿತವಾಗಿದ್ದು, ಶಿಬಿರಾರ್ಥಿಗಳಿಗೆ ಪರಿಷತ್ತಿನಿಂದ ಊಟ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶಿಬಿರದ ನಿರ್ದೇಶಕಿ ಶ್ರೀಮತಿ ಹರಿಪ್ರಸಾದ್(ಮೊ.ನಂ: 9945101649), ಕಚೇರಿ ದೂರವಾಣಿ ಸಂಖ್ಯೆ: 080-26718939 / 9483549159 ಅನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.