ರೋಟರಿ ಕ್ಲಬ್ ವತಿಯಿಂದ ಯು.ಎಸ್.ನಾಯಕ್ ಕನ್ನಡ ಮಾಧ್ಯಮ ಶಾಲೆಗೆ ಬಸ್ ಕೊಡುಗೆ

ಪಟ್ಲ: ಇಲ್ಲಿನ ರೂರಲ್ ಎಜುಕೇಶನ್ ಸೊಸೈಟಿಯೊಂದಿಗೆ ಯು.ಎಸ್.ನಾಯಕ್ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ರೋಟರಿ ವತಿಯಿಂದ ಬಸ್ಸು ಕೊಡುಗೆ ಮತ್ತು ದಿ. ಪಿ.ಆರ್. ನಾಯಕ್ ಸಂಸ್ಮರಣೆ ಕಾರ್ಯಕ್ರಮವು ಆದಿತ್ಯವಾರದಂದು ನಡೆಯಿತು.

ರೋ. ಗಣೇಶ ನಾಯಕ್ ಬೆಲ್ಪತ್ರೆ ಇವರು ಸೊಸೈಟಿ ವತಿಯಿಂದ ಶಾಲಾ ಮಕ್ಕಳ ಪ್ರಯಾಣಕ್ಕೆ ನೀಡಲಾದ ಬಸ್ಸನ್ನು ಹಸ್ತಾಂತರಿಸಿದರು.

ರೋ. ದಯಾನಂದ ಶೆಟ್ಟಿ ತಮ್ಮ ಸಂಸ್ಮರಣಾ ಭಾಷಣದಲ್ಲಿ ದಿ. ಪಿ.ರವೀಂದ್ರ ನಾಯಕ್ ರವರ ಮುಗ್ಧತೆ, ಅಜಾತಶತ್ರುತ್ವ, ದಾನಗುಣ, ಸತ್ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಸದ್ಗುಣಗಳನ್ನು ಪ್ರಶಂಸಿಸಿ ಸ್ಮರಿಸಿದರು.

ಪತ್ರಕರ್ತ ರೋ. ನಿತ್ಯಾನಂದ ಪಡ್ರೆ ಮಾತನಾಡಿ, ಮಾತ್ರ ಭಾಷೆ ಮಾತ್ರ ವ್ಯಕಿಯ ವಿಕಸನಕ್ಕೆ ಸುಲಭ ಮಾಧ್ಯಮ ಭಾಷೆ. ಕನ್ನಡ ಮಾಧ್ಯಮ ಶಾಲೆಯನ್ನು ಅತ್ಯಾಧುನಿಕ ಮಾದರಿ ಶಾಲೆಯಾಗಿಸುವಲ್ಲಿ ರೂರಲ್ ಎಜುಕೇಶನ್ ಸೊಸೈಟಿಯ ಪ್ರಯತ್ನಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಇದು ಇತರ ಭಾಷಾ ಮಾಧ್ಯಮದ ಶಾಲೆಗಳಿಗಿಂತ ಪ್ರಸಿದ್ಧಿಯನ್ನು ಪಡೆದು ವಿದ್ಯಾರ್ಥಿಗಳು ಕೀರ್ತಿ ತರಲಿ ಎಂದು ಹಾರೈಸಿದರು.

ಶಾಲಾ ಸಂಚಾಲಕ ನಾರಾಯಣ ಶೆಣೈ ಈ ಶಾಲೆಯನ್ನು ಆಕರ್ಷಣೀಯ ಮತ್ತು ಸುವ್ಯವಸ್ಥಿತ ಹಂತಕ್ಕೆ ತಲುಪಿಸುವ ಹೊಣೆ ಮತ್ತು ಕರ್ತವ್ಯ ಎಲ್ಲರದಾಗಿದ್ದು, ದಾನಿಗಳ ಸಹಾಯ ಹಸ್ತ ಸದಾ ಶಾಲೆಗಿರಲಿ ಎಂದರು.

ಸಭೆಯಲ್ಲಿ ರೋ. ರಾಮಚಂದ್ರ ಉಪಾಧ್ಯ, ಗಣೇಶ್ ನಾಯಕ್, ಡಾ. ಮುದ್ದಣ್ಣ ನಾಯಕ್, ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು ,ಚಿ. ಜ್ಯೋತಿರಾದಿತ್ಯ ನಾಯಕ್ ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಶ್ರೀ ನಿತ್ಯಾನಂದ ನಾಯಕ್ ಸ್ವಾಗತಿಸಿದರು, ಶ್ರೀ ಸಚ್ಚಿದಾನಂದ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು ಶ್ರೀಮತಿ ಶಶಿಕಲಾ ಧನ್ಯವಾದಗಳನ್ನಿತ್ತರು.