ಉಡುಪಿ: ಅಕ್ಟೋಬರ್ 30 ರಂದು ಕನ್ನಡ – ತುಳು ಸಾಹಿತ್ಯ ವೇದಿಕೆ ವಾಟ್ಸ್ ಆ್ಯಪ್ ಬಳಗ ಆಯೋಜಿಸಿದ್ದ ಮೊದಲ ಆಫ್ಲೈನ್ ಕಾರ್ಯಕ್ರಮವಾದ ‘ಸಾಹಿತ್ಯ ಸಂಪದ’ ಕಾರ್ಯಕ್ರಮವು ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ, ಗುಂಡ್ಮಿ ಇಲ್ಲಿ ಸರಳವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗೇರಿ ಶೇಖರ ದೇವಾಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ, ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಮತ್ತು ಸಹೋದರ ಬಳಗ ಹೊಂಗಿರಣ ವೇದಿಕೆಯ ನಿರ್ವಾಹಕ ಮಧುಕೇಶವ ಭಾಗ್ವತ್ ಭಾಗವಹಿಸಿದ್ದರು.
ಉಪೇಂದ್ರ ಸೋಮಯಾಜಿಯವರು ‘ಕಾವ್ಯ ಮತ್ತು ಕವನ ಕಟ್ಟುವ ಕಲೆ’ ವಿಚಾರವಾಗಿ ಉಪನ್ಯಾಸ ನೀಡಿದರು. ಚೇಂಪಿ ದಿನೇಶ್ ಆಚಾರ್ಯ ಸಭಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಂಟು ಪುಸ್ತಕಗಳ ಅನಾವರಣ ಮತ್ತು ಧ್ವನಿ ಸುರುಳಿಯ ಬಿಡುಗಡೆ ನಡೆಯಿತು.
ಶ್ರೀಮತಿ ಸುಮನಾ ಹೇರ್ಳೆಯವರ ನೀಲಾಂಬರ (ಭಾವ ಗೀತೆ ಸಂಕಲನ), ಫಕೀರಪ್ಪ ತಾಳಗುಂದ ಅವರ ಮುಕ್ಕಣ್ಣನ ತ್ರಿಪದಿಗಳು ಮತ್ತು ಶ್ರೀಮತಿ ಶೋಭಾ ಹರಿಪ್ರಸಾದ್ ಅವರ ಭಾವ ಕಸ್ತೂರಿ (ಭಾವ ಗೀತೆ ಸಂಕಲನ),
ಬಿಂಕದ ಸಿಂಗಾರಿ (ಗಝಲ್ ಸಂಕಲನ), ಭಾಮಿ ಪುಟ್ಟಿ (ಭಾಮಿನಿಯಲ್ಲಿ ಕಥನ ಕಾವ್ಯ), ಸುಬ್ಬಕ್ಕನ ವಚನಗಳು, ಅಂತರಾಳ (ಕಾವ್ಯ ಸಂಕಲನ) ಮತ್ತು ಬೇವು ಬೆಲ್ಲ ಕಥಾ ಸಂಕಲನ ಲೋಕಾರ್ಪಣೆಗೊಂಡಿರುವ ಎಂಟು ಕೃತಿಗಳು.
ಡಾ. ಫಕೀರಪ್ಪ ತಾಳಗುಂದ ಅವರ ಭಾವ ಗೀತೆಯ ಅಡಕ ಮುದ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವೇದಿಕೆಯ ಸದಸ್ಯೆ ಶ್ರೀಮತಿ ಸುಮಿತಾ ಪ್ರಶಾಂತ್ ಹಾಡಿಗೆ ದನಿಯಾದರು. ಪುಸ್ತಕಗಳ ಮುಖ ಪುಟ ವಿನ್ಯಾಸ ಮತ್ತು ಧ್ವನಿ ಸುರುಳಿಯ ಅಡಕ ಮುದ್ರಿಕೆಯನ್ನು ಪದ್ಮನಾಭ ಪೂಜಾರಿ ನೇರಂಬೋಳು ಇವರು ಮಾಡಿರುತ್ತಾರೆ. ಶ್ರೀಮತಿ ಗೀತಾ ದೇವಿ ಅಡಿಗ, ಶ್ರೀಮತಿ ಮಂಜುಳಾ ತೆಕ್ಕಟ್ಟೆ ಮತ್ತು ಶ್ರೀಮತಿ ಅರುಣಾ ಶ್ರೀನಿವಾಸ್ ಇವರು ವಿಮರ್ಶಾತ್ಮಕವಾಗಿ ಪುಸ್ತಕಗಳ ಅವಲೋಕನಗೈದರು.
ಸಹೋದರ ವೇದಿಕೆ ಹೊಂಗಿರಣ ಸಾಹಿತ್ಯ ಬಳಗದ ಸದಸ್ಯರು ಆಯ್ದ ಮೂವರು ಸದಸ್ಯರಾದ ಶ್ರೀಮತಿ ಶೋಭಾ ಹರಿಪ್ರಸಾದ್ ,ಶ್ರೀಮತಿ ಸುಮನಾ ಹೇರ್ಳೆ ಮತ್ತು ಶ್ರೀಮತಿ ವಾಸಂತಿ ಅಂಬಲಪಾಡಿ ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ವೇದಿಕೆಯ ಸದಸ್ಯರ ಕವಿತೆಗಳ ಗಾಯನ, ಕಥೆ ,ಕವನ ಮತ್ತು ಗಝಲ್ ಗಳ ವಾಚನ ಸಾಹಿತ್ಯ ಸಂಪದ ಕಾರ್ಯಕ್ರಮದ ಇನ್ನೊಂದು ಮುಖ್ಯ ಆಕರ್ಷಣೆಯಾಗಿತ್ತು. ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಶ್ರೀಮತಿ ಸುಮಂಗಲಾ ಭಾರದ್ವಾಜ್ ಮತ್ತು ಶ್ರೀಯುತ ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿ ಇವರ ಯಕ್ಷಗಾನ ಶೈಲಿಯ ಗಾಯನ ಸೊಗಸಾಗಿ ಮೂಡಿ ಬಂತು.
ವರ್ಷಕ್ಕೊಮ್ಮೆ ಆಯ್ದ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗಳಿಗೆ ಆರ್ಥಿಕ ನೆರವು ನೀಡುವುದು ಕನ್ನಡ – ತುಳು ಸಾಹಿತ್ಯ ವೇದಿಕೆ – ಉಡುಪಿ ಇದರ ಸದಾಶಯ ಉದ್ದೇಶ. ಆಸಕ್ತ ಸದಸ್ಯರು ನೀಡಿದ ಹಣ ಸಂಗ್ರಹಿಸಿ ವೃದ್ಧಾಶ್ರಮ, ವಿಕಲ ಚೇತನರ ಆಶ್ರಮ ಮತ್ತು ಮುಳುಗು ತಜ್ಞ ಈಶ್ವರ ಮಲ್ಪೆ ಇವರಿಗೆ ಈಗಾಗಲೇ ನೀಡಿರುತ್ತಾರೆ. ಬಳಗದ ಸದಸ್ಯೆ ಶ್ರೀಮತಿ ಸಂಧ್ಯಾ ಗೀತಾ ಬಾಯಾರು ಸೂಚಿಸಿದ ‘ಸಾಹಿತ್ಯ ಸಂಪದ’ ಎಂಬ ಹೆಸರನ್ನು ಆಯ್ಕೆ ಮಾಡಲಾಗಿತ್ತು.
ವೇದಿಕೆಯ ನಿರ್ವಾಹಕ ಚೇಂಪಿ ದಿನೇಶ ಆಚಾರ್ಯ , ಶ್ರೀಮತಿ ನಿಮಿತಾ ಪ್ರಭಾಕರ ಶೆಟ್ಟಿ, ಶ್ರೀಮತಿ
ಸುಮನಾ ಹೇರ್ಳೆ, ಶ್ರೀಮತಿ ಸುಮಂಗಲಾ ಭಾರದ್ವಾಜ್, ಮಂಜುನಾಥ ಮರವಂತೆ, ಚರಣ್ ಕುಮಾರ್ , ಶೇಖರ ದೇವಾಡಿಗ ಮತ್ತು ಶ್ರೀಮತಿ ಶೋಭಾ ಹರಿಪ್ರಸಾದ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಗೌರವಾರ್ಪಣೆ ಸಲ್ಲಿಸಿರುವುದು ಕನ್ನಡ ತುಳು ಸಾಹಿತ್ಯ ವೇದಿಕೆಯ ಹೆಗ್ಗಳಿಕೆಯಾಗಿದೆ.
ವತ್ಸಲಾ ಶಾಸ್ತ್ರೀ ಪ್ರಾರ್ಥಿಸಿದರು, ರಾಮ ದೇವಾಡಿಗರ ಸ್ವಾಗತಿಸಿದರು. ಚರಣ್ ಕುಮಾರ್ ಬಗ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಎರಡೂವರೆ ವರ್ಷಗಳ ವರದಿ ಮಂಡಿಸಿದರು. ಶ್ರೀಮತಿ ವಾಣಿಶ್ರೀ ಐತಾಳ್ ವಂದಿಸಿದರು.