ನಿಟ್ಟೆ: ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2021-22 ನೇ ಸಾಲಿನ ಪದವಿ ಪ್ರದಾನ ಸಮಾರಂಭ

ನಿಟ್ಟೆ: ಪ್ರತಿಯೋರ್ವ ಮಾನವನೂ ತನ್ನ ವಿದ್ಯಾರ್ಥಿ ಜೀವನ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಾಗುವ ಎಡರು ತೊಡರುಗಳು, ಅನಿಶ್ಚಿತತೆಯನ್ನು ಸಮರ್ಥವಾಗಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯ ಮೂಲಕ ಎದುರಿಸಲು ಮಾರ್ಗದರ್ಶನ ನೀಡಿದ ಎಲ್ಲರನ್ನೂ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಹಾದಿಯಲ್ಲಿ ಎದುರಾಗುವ ತೊಂದರೆಗಳೇ ನಮ್ಮ ಯಶಸ್ಸಿಗೆ ಸ್ಪೂರ್ತಿ ಹಾಗೂ ದಾರಿದೀಪವಾಗಬೇಕು ಎಂದು ಅಮೇರಿಕದ ಹ್ಯಾರಿಸ್ಬರ್ಗ್ ನಲ್ಲಿರುವ ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಎಕಡೆಮಿಕ್ ಎಫೇರ್ಸ್ ಎಂಡ್ ಎಡ್ಮಿನಿಶ್ಟ್ರೇಶನ್ ನ ಸೀನಿಯರ್ ಅಸೋಸಿಯೇಟ್ ಡೀನ್ ಡಾ.ಒಮಿದ್ ಅನ್ಸಾರಿ ಅಭಿಪ್ರಾಯಪಟ್ಟರು.

ಅಕ್ಟೋಬರ್ 29 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸದಾನಂದ ಸಭಾಂಗಣದಲ್ಲಿ ನಡೆದ 2021-22 ನೇ ಶೈಕ್ಷಣಿಕ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವಜನತೆ ತಮ್ಮ ಗುರಿಯ ಬಗೆಗೆ ದೃಷ್ಟಿಯನ್ನು ಕೇಂದ್ರೀಕರಿಸಿ ಸಾಧನೆಯ ಮಟ್ಟಿಲನ್ನು ಏರಬೇಕು. ಶ್ರಮ ಹಾಗೂ ನಿಷ್ಠೆಯ ಬದುಕು ನಡೆಸಿ ಹೆತ್ತವರಿಗೆ ಮತ್ತು ಭೋದಿಸಿದ ಸಂಸ್ಥೆಗೆ ಉತ್ತಮ ಹೆಸರು ತರುವ ಜವಾಬ್ದಾರಿ ಯುವ ಜನತೆ ಮೇಲಿದೆ. ನಿಮ್ಮ ವೈಯಕ್ತಿಕ ಏಳಿಗೆಯಿಂದ ಹಲವರ ಏಳಿಗೆಗೆ ಸಹಾಯವಾಗುವಂತೆ ನೀವು ಮಾಡಬೇಕು. ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ನಾವು ನಮ್ಮ ಜೀವನದುದ್ದಕ್ಕೂ ನಿರಂತರ ಕಲಿಕೆಯೊಂದಿಗೆ ಮುನ್ನೆಡದರಷ್ಟೇ ವಯ್ಯಕ್ತಿಕ ಹಾಗೂ ಸಮಾಜದ ಪ್ರಗತಿಯನ್ನು ಕಾಣಲು ಸಾಧ್ಯ ಎಂದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪದವಿಯ ಸಾರ್ಥಕತೆಯು ತಮ್ಮ ಪ್ರಾಮಾಣಿಕ ಬದುಕಿನಲ್ಲಿ ಪ್ರತಿಬಿಂಬಿತವಾಗಬೇಕು. ನಿಟ್ಟೆ ಸಮೂಹ ವಿದ್ಯಾ ಸಂಸ್ಥೆಗಳ ಬೆಳವಣಿಗೆ ಹಾಗೂ ಇಲ್ಲಿನ ಹಳೆ ವಿದ್ಯಾರ್ಥಿಗಳ ಸಾಧನೆಯಗಳನ್ನು ಕಾಣಲು ಸಂತಸವಾಗುತ್ತದೆ. ಪ್ರತಿಯೋರ್ವ ಮಾನವನಿಗೂ ಸಾಮಾಜಿಕ ಬದ್ಧತೆ ಅಗತ್ಯ. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನ ಹಾಗೂ ಆದರ್ಶ ಪ್ರಾಯರಾದ ವ್ಯಕ್ತಿಯನ್ನು ನಾವು ಕಾಣಬಹುದು. ನಾವು ನಮ್ಮ ನಾಡಿನ ಏಳಿಗಾಗಿ ಹೆಮ್ಮೆಯಿಂದ ಕೆಲಸ ಮಾಡಬೇಕು. ಇಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿಯಂತಹ ಹಲವಾರು ಕ್ಷೇತ್ರಗಳು ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಆಸಕ್ತಿಯನ್ನು ಹೆಚ್ಚಿಸಬಹುದಾಗಿದೆ. ಇಂದು ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅತ್ಯುನ್ನತ ಯಶಸ್ಸನ್ನು ಗಳಿಸಲಿ ಎಂದು ಶುಭಹಾರೈಸಿದರು.

ಪದವಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಬಿ.ಇ, ಎಂ.ಟೆಕ್ ಹಾಗೂ ಎಂ.ಸಿ.ಎ ವಿದ್ಯಾರ್ಥಿಗಳಿಗೆ ಡಿಗ್ರಿ ಪ್ರದಾನ ಮಾಡಲಾಯಿತು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿಪದಕಗಳನ್ನು ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಉಪಕುಲಸಚಿವೆ ಡಾ.ರೇಖಾ ಭಂಡಾರ್ಕರ್, ಉಪ ಪರೀಕ್ಷಾ ನಿಯಂತ್ರಕ ಡಾ.ಸುಬ್ರಹ್ಮಣ್ಯ ಭಟ್, ನಿಟ್ಟೆ ವಿಶ್ವವಿದ್ಯಾಲಯದ ಕರಿಕುಲಮ್ ಡೆವಲಪ್ಮೆಂಟ್ ನ ನಿರ್ದೇಶಕ ಡಾ.ನಾಗೇಶ್ ಪ್ರಭು, ನಿಟ್ಟೆ ತಾಂತ್ರಿಕ ಕಾಲೇಜಿನ ಇಂಡಸ್ಟ್ರೀ ಇನ್ಶ್ಟಿಟ್ಯೂಟ್ ಇಂಟರಾಕ್ಷನ್‌ನ ನಿರ್ದೇಶಕ ಡಾ.ಪರಮೇಶ್ವರನ್, ಸ್ಟೂಡೆಂಟ್ ವೆಲ್ಫೇರ್, ಎಟ್ಮಿಶನ್, ಆರ್&ಡಿ ಡೀನ್ ಗಳು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅತಿಥಿಗಳನ್ನು ಸ್ವಾಗತಿಸಿ, ವಾರ್ಷಿಕ ವರದಿಯನ್ನು ವಾಚಿಸಿದರು. ಉಪಪ್ರಾಂಶುಪಾಲ ಡಾ.ಐ.ಆರ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು. ಉಪಪ್ರಾಂಶುಪಾಲ ಡಾ.ಶ್ರೀನಿವಾಸ್ ರಾವ್ ಬಿ.ಆರ್ ಕಾರ್ಯಕ್ರಮದ ಮೆರವಣಿಗೆಯನ್ನು ಮುನ್ನಡೆಸಿದರು. ಸಹಾಯಕ ಪರೀಕ್ಷಾ ನಿಯಂತ್ರಕ ಡಾ. ವೆಂಕಟೇಶ್ ಕಾಮತ್ ವಂದಿಸಿದರು. ನಿಟ್ಟೆ ವಿದ್ಯಾಸಂಸ್ಥೆಯ ಬಾಲಕರ ವಿದ್ಯಾರ್ಥಿ ನಿಲಯದ ಚೀಫ್ ವಾರ್ಡನ್ ಹಾಗೂ ಸಹಪ್ರಾಧ್ಯಾಪಕ ಡಾ. ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.