ಸುರತ್ಕಲ್: ಅಕ್ರಮ ಟೋಲ್ ಗೇಟ್ ವಿರುದ್ಧ ಟೋಲ್ ವಿರೋಧಿ ಹೋರಾಟ ಸಮಿತಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಪ್ರತಿಭಟನೆ ಆರಂಭಿಸಿದ್ದು, ಮುಂಜಾನೆಯೆ ಟೋಲ್ ಗೇಟ್ ಬಳಿ ಹೋರಾಟ ಸಮಿತಿ ಮುಖಂಡರು ಮತ್ತು ಸದಸ್ಯರು ಧರಣಿ ಕೂತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಜಿಲ್ಲೆಯ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಏಳು ವರ್ಷಗಳಿಂದ ಟೋಲ್ ತೆರವಿಗೆ ದಿನಾಂಕ ಮುಂದೂಡುತ್ತಲೇ ಬಂದಿದ್ದಾರೆ. ಈಗ ನವೆಂಬರ್ 9 ಗಡುವು ನೀಡಿದ್ದಾರೆ. ಆದರೆ ಅವರನ್ನು ನಂಬುವ ಹಾಗಿಲ್ಲ. ಪ್ರತಿಭಟನೆ ಎದುರಿಸಲು ಜಿಲ್ಲಾಡಳಿತ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ. ಆದರೆ ಇದರಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಲ್ಲಿಂದ ಟೋಲ್ ಗೇಟ್ ತೆರವುಗೊಳ್ಳುವ ತನಕ ಹಗಲು ರಾತ್ರಿ ಹೋರಾಟ ಮುಂದುವರಿಯಲಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಬಿ. ಕೆ. ಇಮ್ತಿಯಾಜ್, ಮಂಜುಳಾ ನಾಯಕ್, ರಾಘವೇಂದ್ರ ರಾವ್, ಎಂ. ಜಿ ಹೆಗಡೆ, ದಿನೇಶ್ ಹೆಗ್ಡೆ, ಪುರುಷೋತ್ತಮ್ ಚಿತ್ರಾಪುರ, ಮೊಯಿದೀನ್ ಬಾವ, ದಿನೇಶ್ ಕುಂಪಲ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಯಾದವ್ ಶೆಟ್ಟಿ, ವಸಂತ ಆಚಾರಿ ಮುಂತಾದವರು ಧರಣಿಯಲ್ಲಿ ನಿರತರಾಗಿದ್ದಾರೆ.