ಉಡುಪಿ: ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ಅಕ್ಟೋಬರ್ 5 ರಂದು ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಚಾಲನೆಗೊಂಡಿದ್ದು, 60 ದಿನ 27 ರಾಜ್ಯಗಳಲ್ಲಿ15,000 ಕಿ.ಮೀ ಕ್ರಮಿಸಿ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನ.7 ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದರು.
ಈ ದಿಗ್ವಿಜಯ ಯಾತ್ರೆಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಮುಖರನ್ನು ಒಳಗೊಂಡ ಸ್ವಾಗತ ಸಮಿತಿ ರಚನೆ ಮಾಡಲಾಗಿದ್ದು,ನವೆಂಬರ್ 7 ರಂದು ಪ್ರಭು ಶ್ರೀ ರಾಮಚಂದ್ರನ ರಥಯಾತ್ರೆಯನ್ನು ಸ್ವಾಗತಿಸಲು ಪೂರ್ವ ತಯಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಧಾರ್ಮಿಕ ಕೇಂದ್ರ ಮತ್ತು ಸಂಘಸಂಸ್ಥೆಗಳಲ್ಲಿ ಪೂರ್ವಭಾವಿ ಸಭೆ ನಡೆದಿದ್ದು,ಸಮಸ್ತ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಹಕರಾಗಿದ್ದಾರೆ. ನವೆಂಬರ್ 7 ರಂದು ಬೆಳಿಗ್ಗೆ 9 ಗಂಟೆಗೆ ದಿಗ್ವಿಜಯ ರಥಯಾತ್ರೆಯು ಉಡುಪಿಗೆ ತಲುಪಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಸಂತೆಕಟ್ಟೆಯಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು.10 ಗಂಟೆಗೆ ಸಂತೆಕಟ್ಟೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದ್ದು, ಸಂತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಶಕ್ತಿ ಶಾಂತಾನಂದ ಸ್ವಾಮೀಜಿಯವರು ಹಾಗೂ ಉಡುಪಿ ಪೇಜಾವರ ಮಠದ ಮಠಾಧೀಶ, ರಾಮಮಂದಿರದ ವಿಶ್ವಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದು,ಆಶೀರ್ವಚನ ನೀಡಲಿರುವರು ಎಂದರು.
ಧಾರ್ಮಿಕ ಸಭಾಕಾರ್ಯಕ್ರಮದ ಬಳಿಕ ಅಯೋಧ್ಯೆಯಿಂದ ದಿಗ್ವಿಜಯ ರಥಯಾತ್ರೆಯಲ್ಲಿ ಬರುವ ಶ್ರೀರಾಮನ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಲು ಅವಕಾಶ ನೀಡಲಾಗುವುದು. ತದನಂತರ ಸಂತೆಕಟ್ಟೆಯಿಂದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಬೃಹತ್ ವಾಹನ ಜಾಥಾದ ಮೂಲಕ ಯಾತ್ರೆಯು ಸಮಾಪನಗೊಳ್ಳಲಿದೆ. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಾಡೋಜ ಡಾ.ಜಿ.ಶಂಕರ್ ಇವರ ಸಹಕಾರದಿಂದ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.
ಅಯೋಧ್ಯೆಯಲ್ಲಿ ರಾಮಮಂದಿರದ ಆಗಬೇಕೆನ್ನುವ ಹಿಂದೂಗಳ ಬಲುದೊಡ್ಡ ಕನಸು ನನಸಾಗಲಿರುವ ಸಂದರ್ಭದಲ್ಲಿ ಉಡುಪಿಯ ಭಕ್ತಾಭಿಮಾನಿಗಳಿಗೆ ಅಯೋಧ್ಯೆಗೆ ಹೋಗಿ ರಾಮನಸೇವೆಯನ್ನು ಮಾಡಲಿಕ್ಕಾಗದಿದ್ದಲ್ಲಿ, ಅಯೋಧ್ಯೆಯಿಂದ ಬರುವ ದಿಗ್ವಿಜಯ ರಥಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುವ ಅವಕಾಶ ದಕ್ಕಿದೆ. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಾಂಪ್ರದಾಯಿಕ ಉಡುಗೆಗಳಲ್ಲಿ ಬರಬೇಕು ಎಂದು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮನೋಹರ್ ಶೆಟ್ಟಿ ತೋನ್ಸೆ,
ಉಪಾಧ್ಯಕ್ಷ ರಾಮ ಪೂಜಾರಿ ಸಂತೆಕಟ್ಟೆ ಮಹಿಳಾ ಪ್ರಮುಖೆ ತಾರಾ ಉಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.