ಸ್ವಾರ್ಥಕ್ಕಾಗಿ ಸಮಾಜಸೇವೆ ಮಾಡುತ್ತಿಲ್ಲ: ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಜಿ. ಶಂಕರ್ ಗುಡುಗು

ಕುಂದಾಪುರ: ಕಳೆದ ಇಪ್ಪತ್ತು ವರ್ಷಗಳಿಂದಲೂ ಸಮಾಜಸೇವೆ ಮಾಡುತ್ತಾ ಬಂದಿದ್ದೇನೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಬದುಕುತ್ತಿದ್ದು, ಸಂಕಷ್ಟದಲ್ಲಿರುವ ಎಲ್ಲಾ ಸಮಾಜದವರಿಗೂ ಸ್ಪಂದಿಸಿದ್ದೇನೆ. ಸ್ವಾರ್ಥಕ್ಕಾಗಿ ನಾನು ಸಮಾಜ ಸೇವೆ ಮಾಡುತ್ತಿಲ್ಲ. ಈ ಬಗ್ಗೆ ಯಾವುದೇ ವೇದಿಕೆಯಲ್ಲೂ ಸಷ್ಟಪಡಿಸಲು ನಾನು ತಯಾರಾಗಿದ್ದೇನೆ ಎಂದು ನಾಡೋಜ ಡಾ. ಜಿ.ಶಂಕರ್ ಸಂಸದೆ ಶೋಭಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಹಾಗೂ ಜಿಲ್ಲಾ ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಕುಂದಾಪುರ ರೋಟರಿ ಕಲಾ ಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಜಿಲ್ಲೆಯ ಎಲ್ಲಾ ಸಮಾಜದ 5,100 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊಗವೀರ ಸಮಾಜದವರಿಗೆ ಮಾತ್ರವಲ್ಲದೇ ಎಲ್ಲಾ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇನೆ. ಸ್ವಾರ್ಥಕ್ಕಾಗಿ ಸಮಾಜಸೇವೆ ಮಾಡುವ ಹೀನ ಬುದ್ದಿ ನನಗೆ ಬಂದಿಲ್ಲ. ಮೊಗವೀರರಿಗೆ ವಿಶಾಲ ಹೃದಯವಿದೆ. ಸ್ವಾರ್ಥ ರಾಜಕಾರಣಿಗೆ ನೀವು ಬುದ್ದಿ ಕಲಿಸುತ್ತೀರಲ್ವ ಎಂದು ಸಮಾರಂಭಕ್ಕೆ ಆಗಮಿಸಿದ ವಿದ್ಯಾರ್ಥಿ ಪೋಷಕರಲ್ಲಿ ಅವರು ಪ್ರಶ್ನಿಸಿದರು. ನಾನು ಸ್ವಾರ್ಥನಲ್ಲ, ರಾಜಕಾರಣಿಗಳು ಸ್ವಾರ್ಥಿಗಳು. ಯಾವುದೇ ಪಕ್ಷಗಳಿರಲಿ ಎಂದು ಜಿ ಶಂಕರ್ ಸಂಸದೆ ಶೋಭಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರ ಬಗ್ಗೆ ರಾಜಕಾರಣಿಗಳಿಗೆ ಚಿಂತೆಯೇ ಇಲ್ಲ:

ಕ್ಷೇತ್ರವನ್ನು ಅಭಿವೃದ್ದಿ ಮಾಡುವ ಶಾಸಕರಿಗೆ, ಸಂಸತ್ ಸದಸ್ಯರಿಗೆ ಮತವನ್ನು ಹಾಕಿ.  ಮರಳಿನ ಸಮಸ್ಯೆ, ಮೀನುಗಾರರು ನಾಪತ್ತೆಯಾದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಜಿ. ಶಂಕರ್ ರಾಜಕಾರಣಿಗಳ ನಡೆಯ ಬಗ್ಗೆ ಖೇದ ವ್ಯಕ್ತಪಡಿಸಿದರು.

ಸಂಸತ್ ಸದಸ್ಯರು ಎಲ್ಲಾ ಮತಗಟ್ಟೆಗಳ ವೀಕ್ಷಣೆ ಮಾಡಿ ಎಂದಿದ್ದಾರೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ವೀಕ್ಷಣೆ ಮಾಡುತ್ತೇನೆ, ಬಡವರ ಮನೆಗೆ ಸ್ವತಃ ನಾನೇ ಖುದ್ದಾಗಿ ಹೋಗುತ್ತೇನೆ. ಜನರ ಕಷ್ಟಗಳನ್ನು ಶಾಸಕರಿಗೆ, ಸಂಸತ್ ಸದಸ್ಯರಿಗೆ ತಲುಪಿಸುವ ಕೆಲಸವನ್ನು ನಿಮ್ಮೆಲ್ಲರ ರಾಯಭಾರಿಯಾಗಿ ಮಾಡುತ್ತೇನೆ ಎಂದು ಜಿ.ಶಂಕರ್ ಹೇಳಿದರು.

ಮೋದಿ ಅಲೆಯಲ್ಲಿ ಗೆದ್ದವರು  ಮೈಮರೆಯಬಾರದು:

ಈ ಬಾರಿಯ ಚುನಾವಣಾ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ಸಮಾಜದ ಬೇಡಿಕೆ ಸ್ಪಂದಿಸದೇ ಇರುವುದರಿಂದ ಒಂದು ಸಂದೇಶವನ್ನು ರವಾನಿಸಿದ್ದೇನೆ. ಮೋದಿ ಅಲೆಯಲ್ಲಿ ಗೆದ್ದವರು ಹಿಗ್ಗಿ ಮೈಮರೆಯಬಾರದು. ನಮ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿ ಎಂದರು.

ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಕೆ.ಕೆ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ್ ಕರ್ಕೇರಾ, ಉಚ್ಚಿನ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಜಿಲ್ಲಾ ಮೊಗವೀರ ಯುವಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಗಣೇಶ್ ಕಾಂಷನ್ ಸ್ವಾಗತಿಸಿದರು. ಬಳಿಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಇದಕ್ಕೂ ಮುನ್ನಾ ಅಂತರಾಷ್ಟ್ರೀಯ ಜಾದುಗಾರ ಕುದ್ರೋಳಿ ಗಣೇಶ್ ಅವರಿಂದ ಜಾದು ಪ್ರದರ್ಶನ ನಡೆಯಿತು.