ಭಾರತೀಯ ಬಿಲಿಯನೇರ್ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸಮಾಜ ಸೇವಕಿ ಹಾಗೂ ಲೇಖಕಿ ಸುಧಾ ಮೂರ್ತಿ ದಂಪತಿಗಳ ಮಗಳಾದ ಅಕ್ಷತಾ ಮೂರ್ತಿ 1980 ರಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದರು. ಅಕ್ಷತಾ ಮೂರ್ತಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಾಧಾರಣ ಹುಡಿಗಿಯಂತೆಯೆ ಬೆಳೆದರು. ಮೂರ್ತಿ ದಂಪತಿಗಳು ಮುಂಬೈನಲ್ಲಿ ತಮ್ಮ ವೃತ್ತಿಜೀವನವನ್ನು ನಿರ್ಮಿಸುವುದರಲ್ಲಿ ವ್ಯಸ್ತವಾದ್ದರಿಂದ ಅಕ್ಷತಾ ಆರಂಭದ ದಿನಗಳನ್ನು ತನ್ನ ಅಜ್ಜಿ ಮನೆಯಲ್ಲಿಯೆ ಕಳೆದಿದ್ದಾರೆ.
ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದ ಅಕ್ಷತಾ, ಉನ್ನತ ಅಧ್ಯಯನಕ್ಕಾಗಿ ಫ್ರೆಂಚ್ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು ಕ್ಯಾಲಿಫೋರ್ನಿಯಾಗೆ ತೆರಳಿದರು. ನಂತರ ಲಾಸ್ ಎಂಜಲೀಸ್ ನಲ್ಲಿನ ಫ್ಯಾಶನ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್ನಿಂದ ಬಟ್ಟೆ ತಯಾರಿಕೆಯಲ್ಲಿ ಡಿಪ್ಲೊಮಾವನ್ನು ಪಡೆದರು.
ಮೂರ್ತಿ ಮತ್ತು ಸುನಕ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿರುವಾಗ ಒಬ್ಬರನ್ನೊಬ್ಬರು ಭೇಟಿಯಾದರು. ಪ್ರೀತಿಯಲ್ಲಿ ಬಿದ್ದ ಜೋಡಿಗಳು ಶೀಘ್ರವೆ ಮದುವೆಯಾಗಲು ನಿರ್ಧರಿಸಿದ್ದರಿಂದ 2009 ರಲ್ಲಿ ಬೆಂಗಳೂರಿನಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾದರು.
ಪ್ರಸ್ತುತ ತನ್ನದೇ ಆದ ಫ್ಯಾಶನ್ ಲೇಬಲ್, ಅಕ್ಷತಾ ಡಿಸೈನ್ಸ್ ಅನ್ನು ನಿರ್ವಹಿಸುತ್ತಿರುವ ಅಕ್ಷತಾ, 2010 ರಲ್ಲಿ ಪ್ರಾರಂಭಿಸಲಾದ ವೆಂಚರ್ ಕ್ಯಾಪಿಟಲ್ ವ್ಯವಹಾರದ ನಿರ್ದೇಶಕಿಯೂ ಆಗಿದ್ದಾರೆ. ಖಾಸಗಿ ಇಕ್ವಿಟಿ ಸಂಸ್ಥೆ ಕ್ಯಾಟಮಾರಾನ್ ವೆಂಚರ್ಸ್ ಹಾಗೂ ಡಿಗ್ಮೆ ಫಿಟ್ನೆಸ್ (ಜಿಮ್ ಚೈನ್) ಮತ್ತು ಪುರುಷರ ಉಡುಪು ಬ್ರಾಂಡ್ ನ್ಯೂ ಮತ್ತು ಲಿಂಗ್ವುಡ್ ನ ನಿರ್ದೇಶಕಿಯಾಗಿದ್ದಾರೆ.
ಅಕ್ಷತಾ ಟೆಂಡ್ರಿಸ್ನ ನಿರ್ದೇಶಕಿಯೂ ಆಗಿದ್ದಾರೆ, ಇದು ಡಚ್ ಕ್ಲೀನ್ಟೆಕ್ ಇನ್ಕ್ಯುಬೇಟರ್ ಫಂಡ್ ಆಗಿದೆ. ಇದಲ್ಲದೆ, ಅವರು ಇನ್ಫೋಸಿಸ್ನಲ್ಲಿ 700 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ತಮ್ಮ ಪತಿಯೊಂದಿಗೆ ಲಂಡನ್ನ ಕೆನ್ಸಿಂಗ್ಟನ್ನಲ್ಲಿ 7 ಮಿಲಿಯನ್ ಪೌಂಡ್ ಮೌಲ್ಯದ ಮನೆ ಸೇರಿದಂತೆ ಕನಿಷ್ಠ 4 ಆಸ್ತಿಗಳನ್ನು ಜಂಟಿಯಾಗಿ ಹೊಂದಿದ್ದಾರೆ.
ಆಕೆಯ ಅನೇಕ ಸಕಾರಾತ್ಮಕ ಅಂಶಗಳ ಹೊರತಾಗಿಯೂ, ಮೂರ್ತಿ ಇತ್ತೀಚೆಗೆ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಯುಕೆಯಲ್ಲಿ ಆಕೆಯ ವಾಸಸ್ಥಳೇತರ ಸ್ಥಿತಿಯು ಸಾಗರೋತ್ತರ ಗಳಿಕೆಯ ಮೇಲೆ ತೆರಿಗೆಯನ್ನು ಪಾವತಿಸುವುದರಿಂದ ವಿನಾಯಿತಿ ನೀಡುತ್ತದೆ. ಪ್ರಧಾನಿ ಗಾದಿಗೆ ರಿಷಿ ಸುನಕ್ ಅವರ ಕೊನೆಯ ಓಟದ ಸಮಯದಲ್ಲಿ ಇದು ವಿವಾದಕ್ಕೆ ಕಾರಣವಾಯಿತು. ತದನಂತರ ಅಕ್ಷತಾ ಅವರು ಸ್ವಇಚ್ಛೆಯಿಂದ ತೆರಿಗೆಗಳನ್ನು ಪಾವತಿಸುವುದಾಗಿ ಘೋಷಿಸಿದರು.
ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಇನ್ಫೋಸಿಸ್ ನ ಒಡೆಯರ ಮಗಳು ಇಂದು ಇಂಗ್ಲೆಂಡ್ ನ ಪ್ರಥಮ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.