ಶಿವಮೊಗ್ಗ: ಕೆಲವು ತಿಂಗಳುಗಳ ಹಿಂದೆ ಹಿಂದೂ ಕಾರ್ಯಕರ್ತ ಹರ್ಷನ ಕ್ರೂರ ಹತ್ಯೆಗೆ ಸಾಕ್ಷಿಯಾದ ಶಿವಮೊಗ್ಗದಲ್ಲಿ ಮತ್ತೊಮ್ಮೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. 25 ವರ್ಷದ ಪ್ರಕಾಶ್ ಎಂಬ ಯುವಕನ ಮೇಲೆ ಸೋಮವಾರ ದುಷ್ಕರ್ಮಿಗಳು ಆರ್ಎಸ್ಎಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ನಡೆದಾಗ ಪ್ರಕಾಶ್ ತಮ್ಮ ಮನೆ ಮುಂದೆ ನಿಂತಿದ್ದರು. ಹಲ್ಲೆಗೊಳಗಾದ ಪ್ರಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾನು ವೀರ ಸಾವರ್ಕರ್ ಬಗ್ಗೆ ಆಯೋಜಿಸಲಾಗಿದ್ದ ಹಿಂದೂ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಆ ಬಳಿಕ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ ಪ್ರಕಾಶ್ ಹೇಳಿದ್ದಾರೆ.
ಶಿವಮೊಗ್ಗ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಬೈಕಿನಲ್ಲಿ ಬಂದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತನ್ವೀರ್, ಫೌಜಾನ್, ಅಜರ್ ಎಂಬವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಒಟ್ಟು ಮೂರು ಬೈಕ್ ಗಳಲ್ಲಿ 9 ಮಂದಿ ಹಲ್ಲೆ ಮಾಡಲು ಬಂದಿದ್ದರೆಂದು ಮಾಹಿತಿಗಳಿರುವುದರಿಂದ ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.